ವಿಧ | ದೈನಂದಿನ ಪತ್ರಿಕೆ |
---|---|
ಸ್ವರೂಪ | ಬ್ರಾಡ್ಶೀಟ್ |
ಯಜಮಾನ | ಸಮುದಾಯ ಮಾಧ್ಯಮ ಟ್ರಸ್ಟ್ |
ಸ್ಥಾಪಕ | ಅಬ್ದುಸ್ಸಲಾಂ ಪುತ್ತಿಗೆ |
ಪ್ರಕಾಶಕ | ಅಬ್ದುಸ್ಸಲಾಂ ಪುತ್ತಿಗೆ |
ಸಂಪಾದಕ | ಅಬ್ದುಸ್ಸಲಾಂ ಪುತ್ತಿಗೆ |
ಸುದ್ದಿ ಸಂಪಾದಕ | ಬಿ.ಎಂ. ಬಶೀರ್ |
ಸ್ಥಾಪನೆ | ೨೯ ಆಗಸ್ಟ್ ೨೦೦೩ |
ಭಾಷೆ | ಕನ್ನಡ |
ಪ್ರಧಾನ ಕಚೇರಿ | ಮಂಗಳೂರು, ಕರ್ನಾಟಕ, ಭಾರತ. |
ಅಧಿಕೃತ ಜಾಲತಾಣ | www |
ಸಂವಾದಾತ್ಮಕ ನಿರ್ದೇಶಕ | epaper |
ವಾರ್ತಾ ಭಾರತಿ ಇದು ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗದಿಂದ ಏಕಕಾಲದಲ್ಲಿ ಪ್ರಕಟವಾಗುವ ಕನ್ನಡ ದಿನಪತ್ರಿಕೆಯಾಗಿದೆ.[೧] ಇದನ್ನು ಆಗಸ್ಟ್ ೨೦೦೩ ರಲ್ಲಿ, ಪ್ರಾರಂಭಿಸಲಾಯಿತು. ಇದು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಕರ್ನಾಟಕದ ಒಂಬತ್ತು ರಾಜ್ಯ ಮಟ್ಟದ ಕನ್ನಡ ದಿನಪತ್ರಿಕೆಗಳಲ್ಲಿ ಒಂದಾಗಿದೆ.[೨]
ವಂಚಿತ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಧ್ವನಿ ಮತ್ತು ಸೂಕ್ತ ಪ್ರಾತಿನಿಧ್ಯವನ್ನು ಒದಗಿಸುವುದು ಇದರ ಮುಖ್ಯ ಗಮನವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತಮೂರ್ತಿ ಅವರು ಈ ಪತ್ರಿಕೆಗೆ ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು. ಸಾರ್ವಜನಿಕ ಸಭೆಯಲ್ಲಿ ಅವರು ವಾರ್ತಾ ಭಾರತಿಯನ್ನು "ಕರ್ನಾಟಕದ ಕಾವಲುಗಾರ" ಎಂದು ಕರೆದರು. ವಾರ್ತಾ ಭಾರತಿಯು ಇಡೀ ರಾಷ್ಟ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದೆ.[೩] ಅಬ್ದುಸ್ಸಲಾಂ ಪುತ್ತಿಗೆಯವರು ಮತ್ತು ವಾರ್ತಾಭಾರತಿಯ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾದ ವಡ್ಡರ್ಸೆ ರಘುರಾಮ ಶೆಟ್ಟಿಯವರು ೧೯೮೪ ರಲ್ಲಿ, ಮುಂಗಾರು ಕನ್ನಡ ದಿನಪತ್ರಿಕೆಯನ್ನು ಪ್ರಾರಂಭಿಸಿದರು.[೪] ಸಮಾಜದ ಎಲ್ಲಾ ಜಾತಿಗಳು, ಸಮುದಾಯಗಳು ಮತ್ತು ವರ್ಗಗಳಿಗೆ ನ್ಯಾಯಯುತ ಪ್ರಾತಿನಿಧ್ಯವನ್ನು ಒದಗಿಸುವ ಉದಾರ ನೀತಿಗೆ ಮುಂಗಾರು ಕನ್ನಡ ದಿನಪತ್ರಿಕೆಯು ಹೆಸರುವಾಸಿಯಾಗಿತ್ತು. ಇದು ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದುಳಿದ ಸಮುದಾಯಗಳ ಹಲವಾರು ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮೂಲಕ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮಹತ್ವದ ಹುರುಪು ಮೂಡಿಸಿದೆ.[೫]
ಯು.ಆರ್.ಅನಂತಮೂರ್ತಿ, ಯು.ಬಿ.ಬಣಕಾರ್, ಡಾ.ನಿರಂಜನ ಆರಾಧ್ಯ ಸೇರಿದಂತೆ ಹಲವಾರು ಪ್ರಸಿದ್ಧ ಕನ್ನಡ ಎಡಪಂಥೀಯ, ಸಾಮಾಜಿಕ ಕಾರ್ಯಕರ್ತರು ಮತ್ತು ದಲಿತ ಸಿದ್ಧಾಂತಿಗಳು ಪತ್ರಿಕೆಗೆ ನಿಯಮಿತವಾಗಿ ಬರೆಯುತ್ತಾರೆ.[೬] ೨೦೧೭ ರಲ್ಲಿ, ವಾರ್ತಾ ಭಾರತಿ ಪತ್ರಕರ್ತನನ್ನು ದಕ್ಷಿಣ ಕನ್ನಡ ಪೊಲೀಸರು ವಶಕ್ಕೆ ತೆಗೆದುಕೊಂಡು ಕಾರಣ ಪತ್ರವನ್ನು ನೀಡಿದರು. ನಂತರ, ಈ ಪತ್ರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.[೭] ೨೦೧೭ ರಲ್ಲಿ, ವಾರ್ತಾ ಭಾರತಿಯ ಸಾಮಾಜಿಕ ಮಾಧ್ಯಮ ಪುಟವನ್ನು ಫೇಸ್‌ಬುಕ್ ನಿರ್ಬಂಧಿಸಿತು. ನಂತರ, ಅದನ್ನು ಮರುಸ್ಥಾಪಿಸಲಾಗಿತ್ತಾದರೂ, ಅದು ಏಕೆ ಸಂಭವಿಸಿತು ಎಂಬುದಕ್ಕೆ ಸ್ಪಷ್ಟ ವಿವರಣೆ ಇರಲಿಲ್ಲ.[೮]