ವಿಜಯಪುರ | |
ರಾಜ್ಯ - ಜಿಲ್ಲೆ |
ಕರ್ನಾಟಕ - ವಿಜಯಪುರ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
33.05 km² - 553 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2011) - ಸಾಂದ್ರತೆ |
3,27,427 - 265/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 586101 - +08352 - KA-28 |
ವಿಜಯಪುರವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯು ಜಿಲ್ಲಾಡಾಳಿತ ಒಂದು ಪ್ರಮುಖ ನಗರವಾಗಿದೆ . ವಿಜಯಪುರ ನಗರವು ಬೆಂಗಳೂರಿನಿಂದ ಉತ್ತರ - ಪಶ್ಚಿಮಕ್ಕೆ 520 ಕಿ.ಮೀ. ದೂರದಲ್ಲಿದೆ.
ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ, ವಿಜಾಪುರ ಮತ್ತು ಬಿಜಾಪುರ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. ೧೦-೧೧ ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. ೧೩ ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. ೧೩೪೭ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.
ಕ್ರಿ.ಶ. ೧೫೧೮ ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. ೧೬೮೬ ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.
ಕ್ರಿ.ಶ. ೧೭೨೪ರಲ್ಲಿ ವಿಜಯಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. ೧೭೬೦ ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. ೧೮೧೮ ರ ೩ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು.
ಕ್ರಿ.ಶ. ೧೮೪೮ ರಲ್ಲಿ ಸಾತಾರಾ ಮತ್ತು ವಿಜಯಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲಾದಗಿ ಜಿಲ್ಲೆಗೆ ಈಗಿನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕಲಾದಗಿ ಜಿಲ್ಲಾ ಕೇಂದ್ರವನ್ನು ಕ್ರಿ.ಶ. ೧೮೮೫ ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು.
ತದನಂತರ ಕ್ರಿ.ಶ. ೧೯೫೬ ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು ಕರ್ನಾಟಕ ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು ಕರ್ನಾಟಕ ರಾಜ್ಯ ಸರ್ಕಾರವು ೨೦೧೩ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ.
ಅದು ಸಮುದ್ರಮಟ್ಟದಿಂದ ೬೦೦ ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.
ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ.
ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು.
ವಿಜಯನಗರ ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು.
ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ.
ಈ ಕಿರು ಬರಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ ೨೦-೩೦ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ.
ಕೋಟೆಯನ್ನು ಬೇರೆ ಬೇರೆ ವಿನ್ಯಾಸಗಳ ೯೬ ಒರಗುಗಂಬಗಳಿಂದ (ಬ್ಯಾಸ್ಟಿಯನ್) (ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ.
ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ.
ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(೧೬೨೭-೫೬) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು ೧೯೮ ಅಡಿ ಎತ್ತರವಾಗಿವೆ.
ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ.
ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.
ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು.
ಹಾಲ್ ನಿಂದ ೩೩.೨೨ ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು.
ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.
ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ.
ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು ಕರ್ನಾಟಕದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ.
ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ.
ತಿಂಗಳು | ಜನವರಿ | ಫೆಬ್ರುವರಿ | ಮಾರ್ಚ | ಏಪ್ರಿಲ್ | ಮೇ | ಜೂನ್ | ಜೂಲೈ | ಆಗಷ್ಟ | ಸೆಪ್ಟೆಂಬರ | ಅಕ್ಟೋಬರ | ನವೆಂಬರ | ಡಿಸೆಂಬರ | ಸರಾಸರಿ |
ಸರಾಸರಿ ಹೆಚ್ಚು *C (*F) | 30 (87) | 34 (93) | 37 (100) | 39 (103) | 39 (103) | 34 (93) | 31 (88) | 31 (88) | 32 (89) | 32 (89) | 31 (88) | 30 (87) | 33 (92) |
ಸರಾಸರಿ ಕಡಿಮೆ *C (*F) | 16 (61) | 18 (64) | 22 (72) | 25 (77) | 25 (77) | 23 (73) | 22 (72) | 21 (71) | 22 (72) | 20 (69) | 18 (65) | 16 (61) | 21 (71) |
ಮಳೆ ಮಿಮಿ (Inches) | 8.6 (0.3) | 3.1 (0.1) | 6.1 (0.2) | 10.1 (0.3) | 16.2 (0.6) | 61.1 (2.4) | 77.1 (3.1) | 74.5 (2.9) | 62.1 (2.4) | 51.6 (2.1) | 27.2 (1.1) | 3.5 (0.1) | 400.5 (15.78) |
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಯಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ವಿಜಯಪುರದ ಸಾಕ್ಷರತೆಯು ೨೦೧೧ ವರ್ಷದ ಪ್ರಕಾರ ೬೭%. ಅದರಲ್ಲಿ ೭೭% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು ೭ ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ ೧೨ ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.
ಕ್ರ.ಸಂ. | ವಿವರಣೆ | 2011 | 2001 |
1 | ಒಟ್ಟು ಜನಸಂಖ್ಯೆ | 21,77,331 | 18,06,918 |
2 | ಪುರುಷರು | 11,11,022 | 9,26,424 |
3 | ಮಹಿಳೆಯರು | 10,66,309 | 8,80,494 |
4 | ಪ್ರದೇಶ (ಚ. ಕಿ.ಮೀ) | 10,498 | 10,498 |
5 | ಜನಸಾಂದ್ರತೆ /(ಚ. ಕಿ.ಮೀ) | 207 | 172 |
6 | ರಾಜ್ಯದ ಜನಸಂಖ್ಯೆಯಲ್ಲಿ(ಶೇಕಡ) | 3.56% | 3.42% |
7 | ಸರಾಸರಿ ಸಾಕ್ಷರತೆ | 67.15% | 57.01% |
8 | ಪುರುಷರ ಸಾಕ್ಷರತೆ | 77.21% | 69.94% |
9 | ಮಹಿಳಾ ಸಾಕ್ಷರತೆ | 56.72% | 43.47% |
10 | ಅಕ್ಷರಸ್ಥರು | 12,48,268 | 8,66,561 |
11 | ಪುರುಷ ಅಕ್ಷರಸ್ಥರು | 7,30,566 | 5,43,869 |
12 | ಮಹಿಳಾ ಅಕ್ಷರಸ್ಥರು | 5,17,702 | 3,22,692 |
ವಿಜಯಪುರದಲ್ಲಿ [ಬಿಜಾಪುರದಲ್ಲಿ ]ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಯಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಶಿಲ್ಪಕಲೆಗೆ ಹೆಸರಾದ ನಮ್ಮ ನಾಡು ದೇಶ - ವಿದೇಶಗಳ ಪ್ರವಾಸಿರನ್ನೂ ನಿರಂತರವಾಗಿ ಆಕರ್ಷಿಸುತ್ತಲಿದೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ಗೋಲ ಗುಮ್ಮಟ.
ಇದರೊಂದಿಗೆ ಇಸ್ಲಾಂ ವಾಸ್ತುಶಿಲ್ಪ ವೈಭವದ ಭವ್ಯಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಕೋಟೆ, ಗಗನ ಮಹಲ್, ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ ಇಬ್ರಾಹಿಮ್ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆಸರ್ ಮಹಲ್, ಆನಂದ ಮಹಲ್, ಮೆಹತರ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಮಲಿಕ್ - ಎ - ಮೈದಾನ ತೋಪು, ಉಪ್ಪಲಿ ಬುರುಜ್, ತಾಜ್ ಬೌಡಿ, ಚಾಂದ ಬೌಡಿ, ಜಲ ಮಂಜಿಲ್.
ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಶಿಲ್ಪಕಲೆಗಳು ಪುರಾತನ ಕಟ್ಟಡಗಳು ಮತ್ತು ಶ್ರೀ ಸಿದ್ದೇಶ್ವರ ದೇವಾಲಯ, ೭೭೦ ಲಿಂಗಗಳ ಗುಡಿ, ಶಿವಗಿರಿ, ರುಕ್ಮಾಂಗದ ಪಂಡಿತರ ಸಮಾಧಿ, ತೊರವಿ ಲಕ್ಷ್ಮಿ ನರಶಿಂಹ ದೇವಾಲಯ, ಸಹಸ್ರಫಣಿ ಪಾಶ್ವನಾಥಮೂರ್ತಿ ದೇವಾಲಯ ಮುಂತಾದವುಗಳು ವಿಜಯಪುರ ನಗರದಲ್ಲಿ ಉಂಟು.
ಇದು ಮಹಮದ್ ಆದಿಲ್ ಶಾ (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಯಾದ ದಾಬೋಲ್ನ ಯಾಕುತ್ ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ, ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (೧೨೪ ಅಡಿ) ವ್ಯಾಸ ಹೊಂದಿದೆ. ಅದರಂತೆ ೮ ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್).
ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು.
ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. ೧೪೯೦ ರಿಂದ ಕ್ರಿ.ಶ.೧೬೯೬ ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. ೪೪ ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ.
ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು ೮ ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು ೧೭೦೦ ಸೆ.ಮೀ.ವಿಸ್ತೀರ್ಣ ಹೊಂದಿದೆ. ೫೧ ಮೀಟರ್ ಎತ್ತರವಿದೆ.
ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: ೧೫೮೦-೧೬೨೭) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು ೧೬೨೭ ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ ತಾಜ್ ಮಹಲ್ ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ.
ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಕ್ರಿ.ಶ.೧೫೮೦ರಿಂದ ಕ್ರಿ.೧೬೨೭ ರ ಕಾಲದಲ್ಲಿ ಮೊಘಲರ ದೊರೆ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ.
ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ.
ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು ೧೬೩೨ ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು ೧೪ ೪.೨ ಮೀಟರ) ಅಡಿ ಉದ್ದ , ೧.೫ ಮೀಟರ ವ್ಯಾಸ, ೫೫ ಟನ್ ತೂಕ ಹೊಂದಿದೆ. ಇದನ್ನು ೧೭ ನೇ ಶತಮಾನದಲ್ಲಿ ಅಮ್ಮದ ನಗರದಿಂದ ೧೦ ಆನೆಗಳು, ೪೦೦ ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ.
ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು. ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ ೫೫ ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಲ್ಲಿರುವ ಶಾಸನಗಳಿವೆ.
ವಿಜಯಪುರ ನಗರದಿಂದ ೩ ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು.
ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. ೫೫ ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು ೧.೫ ಮೀ.ವ್ಯಾಸವನ್ನು ಹೊಂದಿ, ೪.೪೫ ಮೀಟರ್ ಉದ್ದವಿದೆ.
ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ.
ಜುಮ್ಮಾ ಮಸೀದಿಯನ್ನು ೧೫೭೬ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ ೧೦,೮೦೦ ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ ೨೫೦೦ ಜನ ಪ್ರಾರ್ಥನೆ ಮಾಡ ಬಹು ದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ವಿಜಯಪುರದಲ್ಲಿ ಕ್ರಿ.ಶ.೧೫೫೭-೧೫೮೦ ರಲ್ಲಿ ಐತಿಹಾಸಿಕ ಜುಮ್ಮಾ ಮಸೀದಿಯನ್ನು ಕಟ್ಟಿಸಿದನು.
ತಾಳಿಕೋಟೆಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು. ಸುಮಾರು ೧೦.೮೧೦ ಸೆ. ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬೃಹತ್ತಾದ ಮಸೀದಿಯು ಸುಂದರವಾದ ಗುಮ್ಮಟದೊಂದಿಗೆ ಕಮಾನುಗಳನ್ನು ಹೊಂದಿದೆ. ಸುಮಾರು 2250 ಕ್ಕೂ ಹೆಚ್ಚು ಕಪ್ಪು ಕಲ್ಲಿನ ಹೊದಿಕೆಯನ್ನು ನೆಲದ ಮೇಲೆ ಹೊಂದಿ ಸಲಾಗಿದೆ. ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ.
ಇದರಲ್ಲಿ ಒಟ್ಟು ೩೩ ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ. ಒಟ್ಟು ಇಲ್ಲಿ 12 ಕಮಾನುಗಳಿದ್ದು, ನಂತರ ಮೊಘಲ ದೊರೆ ಔರಂಗಜೇಬನು ಇದಕ್ಕೆ ದೊಡ್ಡ ದ್ವಾರಬಾಗಿಲನ್ನು ನಿರ್ಮಿಸಿದನು.
ಬಾರಾ ಕಮಾನ್ನನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ , ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ. ಈಗಿನ ಕರ್ನಾಟಕ ರಾಜ್ಯ ದಲ್ಲಿರುವ ವಿಜಯಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ.
ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ.
ಆದಿಲ್ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಅಸರ ಮಹಲ್ನ್ನು 1646ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ 3 ಸಣ್ಣ ಕೆರೆಗಳಿವೆ. ವಿಜಯಪುರ ಪ್ರವಾಸ ಮಾಡುವಾಗ ಮಿಠಾರಿ ಮತ್ತು ಅಸಾರ ಮಹಲ್ ಗಳನ್ನು ಕೂಡ ಪ್ರವಾಸಿಗರು ನೋಡಬಹುದು. ಈ ಸುಂದರ ಮಹಲ್ ಗಳ ಸೌಂದರ್ಯ ಕಣ್ಣಾರೆ ನೋಡಿಯೇ ಸವಿಯಬೇಕು.
ಈ ಸುಂದರ ಕಟ್ಟಡಗಳು ಪ್ರವಾಸಿಗರ ಮನಸೆಳೆಯುತ್ತವೆ. ಈ ಐತಿಹಾಸಿಕ ಕಟ್ಟಡಗಳನ್ನು ಪರ್ಶಿಯನ್ ರ ಶೈಲಿಯಲ್ಲಿ ಕಟ್ಟಿಸಲಾಗಿದ್ದು ಇದರಲ್ಲಿ ನ್ಯಾಯಸ್ಥಾನವನ್ನೂ ಕೂಡ ನಿರ್ಮಿಸಲಾಗಿದೆ. ಬೃಹತ್ತಾದ ನಾಲ್ಕುಗೋಡೆಗಳಿರುವ ಈ ಮಹಲ್ ಗಳಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಕಟ್ಟಡದ ಒಳಗಡೆ ಮೂರು ಟ್ಯಾಂಕ್ ಗಳಿದ್ದು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಚಿತ್ರಿಸಲಾಗಿದೆ.
ಈ ಕಟ್ಟಡದ ಒಳಗಿರುವ ಒಂದು ಟ್ಯಾಂಕ್ 15 ಅಡಿ ಆಳವಿದೆ. ಉಳಿದೆರಡೂ ಕೂಡ ಅಷ್ಟೇ ಪ್ರಮಾಣದ ಆಳ ಹೊಂದಿವೆ ಎನ್ನಲಾಗಿದೆ. ಪ್ರತಿ ವರ್ಷ ಇಲ್ಲಿ ಉರುಸ್ ಜರುಗುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಗಗನ್ ಮಹಲ್ನ್ನು 1560 ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು 20 ಮೀಟರ್ ಉದ್ದವಾಗಿದ್ದು , 17 ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು.
ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ವಿಜಯಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು.
ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ವಿಜಯಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ.
ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ.
ಸಂಗೀತ ಮಹಲ್ವು ವಿಜಯಪುರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಕಮಾನ ದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ್. ಇದನ್ನು ಎರಡನೇ ಇಬ್ರಾಹಿಮ್ ಆದಿಲ್ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ.
ಈಗಲೂ ಜಿಲ್ಲಾಡಳಿತ ನವರಸಪುರ ಸಂಗೀತ ಉತ್ಸವ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ. ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ ತೊರವಿ ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ.
ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ವಿಜಯಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ.
ಉಪ್ಪಲಿ ಬುರಜ್ನ್ನು 1584 ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು 24 ಮೀಟರ್ ಎತ್ತರವಾಗಿದ್ದು ಇದರ ಮೇಲೆ 9 ಅಡಿ ಮತ್ತು 8.5 ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ. ಇದು 80 ಪುಟ್ ಎತ್ತರವಿರುವ ವಿಶಿಷ್ಟ ಶೈಲಿಯ ಮಿನಾರ್ ಆಗಿದೆ.
ಬೃಹದಾಕಾರದ ಕಲ್ಲುಗಳಿಂದ ನಿರ್ಮಿಸಲಾದ ಈ ಉಪಲಿ ಬುರ್ಜ್ ನ್ನು ಹಳೆಯ ಯುದ್ಧ ಸಾಮಗ್ರಿಗಳನ್ನು ಇಡಲು ಬಳಸಲಾಗುತ್ತಿತ್ತಂತೆ. ಮೊಘಲರು ಇಲ್ಲಿ ಗುಂಡು, ಮದ್ದು, ತೋಪು, ತುಪಾಕಿ ಮತ್ತಿತರ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು.
ಉಪಲಿ ಬುರ್ಜ್ ಹತ್ತಲು ಕಲ್ಲಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳಿದ್ದು, ಮೇಲಿನಿಂದ ಇಡೀ ವಿಜಯಪುರ ಪಟ್ಟಣದ ಸುಂದರ ನೋಟ ಕಾಣುತ್ತದೆ. ಮೊಘಲರು ಹಿಂದೆ ತಮ್ಮ ಪ್ರದೇಶದ ಮೇಲೆ ಬರುವ ವೈರಿಗಳನ್ನು ದೂರದಿಂದಲೇ ಗುರುತಿಸಲು ಉಪಲಿ ಬುರ್ಜನ್ನು ಬಳಸಿಕೊಳ್ಳುತ್ತಿದ್ದರಂತೆ.
ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾಂದ ಬಾವಡಿ ಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು.
ಕ್ರಿ.ಶ.1557 -1580 ರ ಮೊಘಲ ದೊರೆ ಅಲಿ ಆದಿಲ್ ಶಾಹ್ ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ನೀರಿನ ಬಾವಿ ವಿಜಯಪುರ ಪಟ್ಟಣದ ಪುರ್ವಕ್ಕಿದೆ. ಆದಿಲ್ ಶಾಹನು ತನ್ನ ಹೆಂಡತಿ ಚಾಂದ್ ಬೀಬಿ ಹೆಸರಿನಲ್ಲಿ ನಿರ್ಮಿಸಲಾದ ಈ ನೀರಿನ ಬಾವಿ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ.
ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ವಿಜಯಪುರ ನಗರಕ್ಕೆ ವಲಸೆ ಬಂದರು. ಆಗ ಸಾಕಷ್ಟು ಸಂಖ್ಯೆಯಲ್ಲಿ ಬಂದ ವಲಸಿಗರ ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಆದಲಿ ಶಾಹನು ಅನುಕೂಲ ಮಾಡಿಕೊಟ್ಟನು. ಇದೇ ಸಮಯದಲ್ಲಿ 200 ಲಕ್ಷ ಮಿ.ಲೀ. ನೀರು ಸಂಗ್ರಹ ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು.
ಈ ನೀರನ ಟ್ಯಾಂಕ್ ನ ಉಸ್ತುವಾರಿ ನೋಡಿಕೊಳ್ಳಲೆಂದೇ ಹಲವಾರು ಆಳುಗಳನ್ನು ನೇಮಿಸಿ ಅವರಿಗೆ ವಸತಿಗೆ ಕೂಡ ಬಾವಿ ಹತ್ತಿರವೇ ವ್ಯವಸ್ಥೆ ಮಾಡಿದ್ದ ಕುರುಹುಗಳು ಇಂದಿಗೂ ಇಲ್ಲಿವೆ. ನಂತರದ ದಿನಗಳಲ್ಲಿ ಇದೇ ತರಹದ ಹಲವಾರು ನೀರು ಸಂಗ್ರಹ ಬಾವಿಗಳನ್ನು ವಿಜಯಪುರ ನಗರದಲ್ಲಿ ನಿರ್ಮಿಸಲಾಯಿತು. ಇಂದಿನ ದಿನಗಳಲ್ಲಿ ಈ ಚಾಂದ ಬಾವಡಿ ಹಲವಾರು ಗಣ್ಯರು ಮತ್ತು ಪ್ರವಾಸಿಗರಿಗೆ ವಿಜಯಪುರದಲ್ಲಿ ವಿಶಿಷ್ಟ ಸುಂದರ ತಾಣವಾಗಿದೆ.
ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ.
ಈ ಮಹಲನ್ನು 1620ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ.
ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು.
ಆನಂದ ಮಹಲ್ನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ.
ವಿಜಯಪುರ ನಗರದಿಂದ 20 ಕಿಮೀ ದೂರದ ಕುಮಟಗಿ ಗ್ರಾಮದ ಕೆರೆಯ ಸಮೀಪ ಎರಡು ಮತ್ತು ಕೆರೆಯ ಮಧ್ಯದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಬೇಸಿಗೆ ಅರಮನೆಯಿದೆ.
ವಿಜಯಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿ ಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ.
ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.ಸುಂದರ ವಾಸ್ತುಶೈಲಿಯಲ್ಲಿ ಕಟ್ಟಿರುವ ಇಲ್ಲಿನ ಕೋಟೆಯನ್ನು ಜನರು ಅರಕಿಲ್ಲಾ ಎಂದೇ ಕರೆಯುತ್ತಾರೆ. ಕ್ರಿ.ಶ. 1556 ರಲ್ಲಿ ಯೂಸೂಫ್ ಆದಿಲ್ ಶಾಹನು ಈ ಕೋಟೆಯನ್ನು ಕಟ್ಟಿಸಿದನು. ಈ ಕೋಟೆಯ ಸುತ್ತಲೂ 100 ಯಾರ್ಡ್ ಗಳಷ್ಟು ಅಗಲವಾದ ಕಂದಕವೊಂದು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕವು ಸದ್ಯ ನೀರಿನ ಸಂಗ್ರಹ ಕ್ಕೆ ಬಳಸಲಾಗುತ್ತದೆ.
ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳಿವೆ. ಕೋಟೆ ಗೋಡೆಯ ಎತ್ತರವು 30ರಿಂದ 50 ಅಡಿ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್ ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಮೊಘಲರು ಈ ಕೋಟೆಯನ್ನು ಬಳಸುತ್ತಿದ್ದರು.
ಹಲವಾರು ಪಾಳುಬಿದ್ದ ಸ್ಮಾರಕಗಳು ಈ ಕೋಟೆಯಲ್ಲಿದ್ದು, ಹಳೆಯ ಕಾಲದ ವೈಭವವನ್ನು ನೆನಪಿಗೆ ತರಿಸುತ್ತವೆ. ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಹತ್ವದ ಪಟ್ಟಣವಾಗಿ ವಿಜಯಪುರ ಗುರುತಿಸಿಕೊಂಡಿದೆ. ಆದ್ದರಿಂದಲೇ ಹಲವಾರು ಪ್ರವಾಸಿಗರು ವಿಜಯಪುರದಲ್ಲಿನ ಗಗನ ಮಹಲ್ ಅರಮನೆ, ಸಾತ ಮಂಜಿಲ್, ಬಾರಾ ಕಮಾನ್ ಮತ್ತು ಜಲ ಮಂಜಿಲ್ ಸೇರಿದಂತೆ ಇನ್ನಿತರ ಐತಿಹಾಸಿಕ ಕಟ್ಟಡಗಳನ್ನು ನೋಡಲು ಆಗಮಿಸುತ್ತಾರೆ.
ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ.
ಭಾರತ ದೇಶದ ಮೂರನೇಯ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದನ್ನು ಶಿವಗಿರಿ ಎಂತಲೂ ಕರೆಯುತ್ತಾರೆ. ಪ್ರತಿಮೆಯು 85(26 ಮೀಟರ್) ಅಡಿ ಎತ್ತರವಾಗಿದ್ದು ಮತ್ತು 1500 ಟನ್ ತೂಕ ಇದ್ದು ಟಿ.ಕೆ.ಪಾಟೀಲ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್, ವಿಜಯಪುರ ವತಿಯಿಂದ ನಿರ್ಮಿಸಲಾಗಿದೆ.
ಇದನ್ನು ಶಿವಮೊಗ್ಗ ಮೂಲದ ಬೆಂಗಳೂರಿನ ವಾಸ್ತುಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ರಾಜುರವರು ನೀಲನಕ್ಷೆಯನ್ನು ತಯಾರಿಸಿ ಕೇವಲ 13 ತಿಂಗಳಿನಲ್ಲಿ ನಿರ್ಮಿಸಿದ್ದಾರೆ. ಪ್ರತಿಮೆಯ ಕೆಳಗಡೆ ಚಿಕ್ಕ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಒಳಗಡೆ ಗೋಡೆಯ ಮೇಲೆ ಶಿವನ ಚರಿತ್ರೆಯನ್ನು ಬರೆಸಲಾಗಿದೆ.
ಪಕ್ಕದಲ್ಲಿ 18 ಎಕರೆಯಲ್ಲಿ ಅನಾಥಾಲಯ, ವಸತಿ ಶಾಲೆ ಮತ್ತು ಬಸಂತ ಉದ್ಯಾನವನವನ್ನು ನಿರ್ಮಿಸಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲರು ಅವರ ತಾಯಿಯ ತುಲಾಭಾರವನ್ನು ಚಿನ್ನದಲ್ಲಿ ಮಾಡಿ(55 ಕೆ.ಜಿ ಚಿನ್ನವು 4.5 ಕೋಟಿ ಬೆಲೆಯಾಗಿತ್ತು) ಅದರಿಂದ ಬಂದ ಹಣದಲ್ಲಿ ಶಿವನ ಬೃಹತ ಪ್ರತಿಮೆಯನ್ನು ನಿರ್ಮಿಸಿ ಅಭಿವೃದ್ದಿಪಡಿಸುತ್ತಿದ್ದಾರೆ.
ವಿಜಯಪುರ ನಗರದ ಹೃದಯ ಭಾಗದಲ್ಲಿ ಸ್ಥಾಪಿತವಾಗಿದ್ದು ಪವಿತ್ರ ಹಿಂದೂ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ಜಾತ್ರೆಯಲ್ಲಿ ದನಗಳ ಜಾತ್ರೆಯು ಕೂಡ ಜರಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿಯಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವುದು ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ (ಬಸವಾದಿ ಶರಣರು) ನೆನಪಿಗಾಗಿ ನಿರ್ಮಿಸಲಾಗಿದೆ.
ವಿಜಯಪುರ ನಗರದ ಹೊರಭಾಗದ ತೊರವಿ ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. ಕುಮಾರ ವಾಲ್ಮೀಕಿಯು ಇದೇ ದೇವಾಲಯ ದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವಿ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ.
ತೊರವಿ ಗ್ರಾಮವು ವಿಜಯಪುರದಿಂದ ಪಶ್ಚಿಮಕ್ಕೆ 6 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆ ಯುತ್ತದೆ. 15 ನೇ ಶತಮಾನದಲ್ಲಿ ನರಹರಿ ಎಂಬ ಕವಿ, ಕುಮಾರ ವಾಲ್ಮೀಕಿ ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು ತೊರವಿ ರಾಮಾಯಣವನ್ನು ರಚಿಸಿದ ಎಂಬ ಪ್ರತೀತಿ ಇದೆ.
ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿ ಕ್ರಿ.ಶ. 5ನೇ ಶತಮಾನಕ್ಕೆ ಸೇರಿದ ಸಹಸ್ರಫಣಿ ಪಾರ್ಶ್ವನಾಥ ಬಸದಿ ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ.
ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ. ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು 1008 ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ.
ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳವು ವಿಜಯಪುರದಿಂದ ಅಗ್ನೇಯಕ್ಕೆ ೪ ಕಿ.ಮೀ. ಅಂತರದಲ್ಲಿ ಉಕ್ಕಲಿಗೆ ಹೋಗುವ ಮಾರ್ಗದಲ್ಲಿರುವ ಇದೆ. ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು.
|
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
ವಿಜಯಪುರ ನಗರದ ಬಸವನ ಬಾಗೇವಾಡಿ ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ.
ವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.
ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ
ವಿಜಯಪುರವು ಕರ್ನಾಟಕದ ಬೆಳಗಾವಿ ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಇಂಡಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ.
ವಿಜಯಪುರ ನಗರಸಭೆ Archived 2016-04-22 ವೇಬ್ಯಾಕ್ ಮೆಷಿನ್ ನಲ್ಲಿ.
ಇಂಡಿ ಪುರಸಭೆ Archived 2016-04-07 ವೇಬ್ಯಾಕ್ ಮೆಷಿನ್ ನಲ್ಲಿ.
ಸಿಂದಗಿ ಪುರಸಭೆ Archived 2017-04-22 ವೇಬ್ಯಾಕ್ ಮೆಷಿನ್ ನಲ್ಲಿ.
ಬಸವನ ಬಾಗೇವಾಡಿ ಪುರಸಭೆ Archived 2016-01-10 ವೇಬ್ಯಾಕ್ ಮೆಷಿನ್ ನಲ್ಲಿ.
ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 7 ಹೊಸ ತಾಲ್ಲೂಕುಗಳನ್ನು ರಚಿಸಿದೆ.
ಹೊಸ ತಾಲ್ಲೂಕುಗಳು
ತಾಳಿಕೋಟ ಪುರಸಭೆ Archived 2016-04-23 ವೇಬ್ಯಾಕ್ ಮೆಷಿನ್ ನಲ್ಲಿ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆಯಲ್ಲಿದೆ.
ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ, ವಿಜಯಪುರ.
ಸಕ್ಕರೆ ಕಾರ್ಖಾನೆಗಳು
ಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ.
ಕೈಗಾರಿಕಾ ಪ್ರದೇಶಗಳು
ಕೈಗಾರಿಕಾ ಎಸ್ಟೇಟುಗಳು
|
|
|
|
|
ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತವೆ.
ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ.
ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ ದೆಹಲಿ, ಬೆಂಗಳೂರು, ಮುಂಬಯಿ ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ.
2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ.
ವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ.
ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ರಾಜ್ಯ, ಅಂತರಾಜ್ಯ ಮತ್ತು ಜಿಲ್ಲಾದ್ಯಂತ ಸಂಚರಿಸುತ್ತವೆ.
ವಿಜಯಪುರದಿಂದ ಮುಂಬಯಿ, ಪುನಾ, ಬೆಂಗಳೂರು, ಹೈದರಾಬಾದುಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ (ಗೋವಾ ಮತ್ತು ಮಹಾರಾಷ್ಟ್ರ) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - ಕೆ ಎ - 28 ಆಗಿದೆ. ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ.
ವಿಜಯಪುರ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು
ದಕ್ಷಿಣದಿಂದ ಉತ್ತರದ ಕಡೆಗೆ
|
|
ವಿಮಾನ ನಿಲ್ದಾಣ
ವಿಜಯಪುರ ವಿಮಾನ ನಿಲ್ದಾಣವು ಪಟ್ಟಣದಿಂದ 5ಕಿ.ಮೀ ಮಧಬಾವಿ ಗ್ರಾಮದ ಹತ್ತಿರ ದೂರವಿದೆ. ಇದಕ್ಕಾಗಿ ರಾಜ್ಯ ಸರಕಾರವು 725 ಎಕರೆ ಭೂಮಿಯನ್ನು ಖರೀದಿಸಿದೆ.
ಬಂದರು
ಜಿಲ್ಲೆಗೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ.
ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.
ಕ್ರ.ಸಂ. | ತಾಲ್ಲೂಕುಗಳು | ಬಸವನ ಬಾಗೇವಾಡಿ | ವಿಜಯಪುರ | ಇಂಡಿ | ಮುದ್ದೇಬಿಹಾಳ | ಸಿಂದಗಿ |
1 | ಬಸವನ ಬಾಗೇವಾಡಿ | 0 | 45 | 85 | 37 | 57 |
2 | ವಿಜಯಪುರ | 45 | 0 | 55 | 82 | 60 |
3 | ಇಂಡಿ | 85 | 55 | 0 | 100 | 50 |
4 | ಮುದ್ದೇಬಿಹಾಳ | 37 | 82 | 100 | 0 | 80 |
5 | ಸಿಂದಗಿ | 57 | 60 | 50 | 80 | 0 |
ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣ ದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ.
ವಿಜಯಪುರ ಜಿಲ್ಲೆಯು ಸೈಕ್ಲಿಸ್ಟಗಳ ಕಣಜ. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಸಂತೋಷ್ ಕುರಣಿ, ರಾಜು ಭಾಟಿ, ಆರತಿ ಭಾಟಿ, ಆನಂದ ದಂಡಿನ, ಲಕ್ಷ್ಮಣ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ, ಆಸೀಫ್ ಅತ್ತಾರ, ಶಹೀರಾ ಅತ್ತಾರ, ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಗಂಗೂ ಬಿರಾದಾರ, ಸೀಮಾ ಅಡಗಲ್ಲ, ಸಂಜು ನಾಯಕ,ಶಾಹಿರಾಬಾನು ಲೋಧಿ,ಸಾವಿತ್ರಿ ಹೆಬ್ಬಾಳಟ್ಟಿ, ಶಿವಲಿಂಗಪ್ಪ ಯಳಮೇಲಿ,ಮಲಿಕ್ ಅತ್ತಾರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.
ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ (ಕೆಳಮನೆ), ಒಬ್ಬರು ಲೋಕಸಭೆಗೆ (ಸಂಸದರು) ಮತ್ತು 5 ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ.
ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು
ವಿಜಯಪುರ ನಗರವು ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ನಗರದಲ್ಲಿ ವಿಜಯಪುರ ಅಭಿವೃಧ್ದಿ ಪ್ರಾಧಿಕಾರವು ವಿಜಯಪುರ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ.
ನಗರದಲ್ಲಿ ಅನೇಕಾನೇಕ ಪ್ರಾಥಮಿಕ, ಮಾಧ್ಯಮಿಕ, ಸ್ನಾತಕ, ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ. ಕಲೆ, ವಿಜ್ಞಾನ, ಕಾನೂನು, ವಾಣಿಜ್ಯ, ಆಡಳಿತ, ಗಣಕವಿಜ್ಞಾನ, ವೈದ್ಯಕೀಯ, ಆಯುರ್ವೇದ, ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವಿದೆ. ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ.
ವಿಜಯಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ದವಾಗಿದೆ. ಪ್ರಮುಖವಾಗಿ ಜಿಲ್ಲೆಯ ಸಾಹಿತಿಗಳಾದ ಅಣ್ಣ ಬಸವಣ್ಣ, ಅಭಿನವ ಪಂಪ ನಾಗಚಂದ್ರ, ಕುಮಾರ ವಾಲ್ಮೀಕಿ, ಅಗ್ಗಳ, ಗೋಪಕವಿ, ಕಾಖಂಡಕಿ ಮಹಿಪತಿದಾಸರು, ರುಕ್ಮಾಂಗದ ಪಂಡಿತರು, ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಶಿಂಪಿ ಲಿಂಗಣ್ಣ, ಹಲಸಂಗಿ ಮಧುರ ಚೆನ್ನ, ಹರ್ಡೇಕರ ಮಂಜಪ್ಪ, ಕಾಪಸೆ ರೇವಪ್ಪ, ಶ್ರೀರಂಗ, ರಂ. ಶ್ರೀ. ಮುಗಳಿ, ಮಲ್ಲಪ್ಪ ಚಾಂದಕವಟೆ, ಶಿವಲಿಂಗಪ್ಪ ಯಡ್ರಾಮಿ, ಪ್ರೊ. ಎ.ಎಸ್.ಹಿಪ್ಪರಗಿ, ಡಾ.ಬಿ.ಬಿ.ಹೆಂಡಿ, ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿಗಳು, ಎಮ್.ಎಮ್.ಕಲಬುರ್ಗಿ, ಶಂ.ಗು.ಬಿರಾದಾರ, ಶರಣಪ್ಪ ಕಂಚಾಣಿ, ಕುಮಾರ ಕಕ್ಕಯ್ಯ, ಸಿಸು ಸಂಗಮೇಶ, ಸಂಗಮನಾಥ ಹಂಡಿ, ರಂಜಾನ ದರ್ಗಾ, ಸ.ಜ.ನಾಗಲೋಟಿ ಮಠ, ಎಚ್ ಬಿ ವಾಲೀಕಾರ, ಆರ್. ಆರ್. ಹಂಚಿನಾಳ, ಕೃಷ್ಣ ಕೊಲ್ಹಾರ ಕುಲಕರ್ಣಿ, ಜಿ.ವಿ.ಕುಲಕರ್ಣಿ, ಪಿ.ಬಿ.ಧುತ್ತರಗಿ, ಬಸವರಾಜ ಡೋಣೂರ, ಕೃಷ್ಣಮೂರ್ತಿ ಪುರಾಣಿಕ, ರಾಮಚಂದ್ರ ಕೊಟ್ಟಲಗಿ, ಕೆ.ಎನ್.ಸಾಳುಂಕೆ, ಶಾಂತಾ ಇಮ್ರಾಪುರ, ಪ್ರೊ.ಬಿ.ಆರ್.ಪೋಲೀಸಪಾಟೀಲ, ಪ್ರೊ.ಶಿವರುದ್ರ ಕಲ್ಲೋಳಕರ್, ಶಿವನಗೌಡ ಕೋಟಿ, ಪ್ರೊ.ಎನ್.ಜಿ.ಕರೂರ, ಶ್ರೀ ಗೋಪಾಲ ಪ್ರಹ್ಲಾದರಾವ ನಾಯಕ, ಜಂಬುನಾಥ ಕಲ್ಯಾಣಿ, ಡಾ. ವಿಜಾಯಾ ದೇವಿ, ಪ್ರೊ.ಜಿ.ಬಿ.ಸಜ್ಜನ ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು, ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ಮಿಗಳು, ಲೇಖಕರು ಮೊದಲಾದ ಹಿರಿಯ - ಕಿರಿಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪುರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ 'ಮಲ್ಲಿಗೆ ದಂಡೆ'(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪುರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರ ದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು.
ಡಾ.ಗುರುಲಿಂಗ ಕಾಪಸೆಯವರು 'ಹಲಸಂಗಿ ಹಾಡು'(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ.
ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ.
ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿ ಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು.
1936 ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ - ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ.
ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”
ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುನಲ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡ ದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ.
ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ.
ಅನಂತರ 1923ರಲ್ಲಿ ವಿಜಯಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ.
1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.
ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟು ಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.
ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪುರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ.
‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ.
ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡು ಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಭಿಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
ವಿಜಯಪುರ ನಗರದಲ್ಲಿ ಈ ಹಿಂದೆ (90 ವರ್ಷಗಳ ಹಿಂದೆ ) 1923ರಲ್ಲಿ ಪ್ರಥಮವಾಗಿ ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ನಂತರ ದ್ವೀತಿಯವಾಗಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕೊ.ಚನ್ನಬಸಪ್ಪರವರ ಅಧ್ಯಕ್ಷತೆಯಲ್ಲಿ 9, 10, 11 ಫೆಬ್ರುವರಿ 2013ರಂದು ಸೈನಿಕ ಶಾಲೆಯ ಆವರಣದಲ್ಲಿ ಜರುಗಿತು.
ವಿಜಯಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಕ್ರ.ಸಂ. | ವರ್ಷ | ಸ್ಥಳ | ಅಧ್ಯಕ್ಷತೆ |
9 | 1923 | ವಿಜಯಪುರ | ಸಿದ್ಧಾಂತಿ ಶಿವಶಂಕರ ಶಾಸ್ತ್ರಿ |
79 | 2013 | ವಿಜಯಪುರ | ಕೊ. ಚನ್ನಬಸಪ್ಪ |
ವಿಜಯಪುರ ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಸಿಂಪಿ ಲಿಂಗಣ್ಣ, ಶ್ರೀರಂಗ ಮತ್ತು ಫ.ಗು.ಹಳಕಟ್ಟಿ.
ಕ್ರ.ಸಂ. | ವರ್ಷ | ಸ್ಥಳ | ಅಧ್ಯಕ್ಷತೆ |
12 | 1926 | ಬಳ್ಳಾರಿ | ಫ.ಗು.ಹಳಕಟ್ಟಿ |
38 | 1956 | ರಾಯಚೂರು | ಶ್ರೀರಂಗ |
62 | 1993 | ಕೊಪ್ಪ್ಪಳ | ಸಿಂಪಿ ಲಿಂಗಣ್ಣ |
ಭಾಸ್ಕರಾಚಾರ್ಯರು ವಿಜಯಪುರ ಜಿಲ್ಲೆಯ ಗಣಿತಜ್ಞರು.
ಭಾಸ್ಕರಾಚಾರ್ಯರು ಕರ್ನಾಟಕ ರಾಜ್ಯದ ವಿಜಯಪುರ ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ.
ಭಾಸ್ಕರಾಚಾರ್ಯ (1114 - 1185), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. ಕರ್ನಾಟಕದ ವಿಜಯಪುರದ ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು.
ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು.
ಭಾಸ್ಕರಾಚಾರ್ಯನ ಮುಖ್ಯಕೃತಿಗಳು:
ಇದರಲ್ಲಿ ಎರಡು ಭಾಗಗಳಿವೆ:
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.
ವಿಜಯಪುರ ಕೃಷಿ ಹವಾಮಾನ ಸೇವೆಗಳು
ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.
ಬಿಜಾಪುರಕ್ಕೆ ಸಂಬಂಧಪಟ್ಟ ಕೆಲವು ಮುಖ್ಯ ಮಾಹಿತಿ
"ಮಲಪ್ರಭಾ
ಸಾಂಗಲಿ ಜಿಲ್ಲೆ | ಸೊಲ್ಲಾಪುರ ಜಿಲ್ಲೆ | ಕಲಬುರಗಿ ಜಿಲ್ಲೆ | ||
ಬೆಳಗಾವಿ ಜಿಲ್ಲೆ | ಯಾದಗಿರಿ ಜಿಲ್ಲೆ | |||
ವಿಜಯಪುರ ಜಿಲ್ಲೆ | ||||
ಬಾಗಲಕೋಟೆ ಜಿಲ್ಲೆ | ಬಾಗಲಕೋಟೆ ಜಿಲ್ಲೆ | ರಾಯಚೂರು ಜಿಲ್ಲೆ |