ವೇರಿನಾಗ್ (ಅಥವಾ ವಿತಸ್ತತ್ರ) ಒಂದು ಪ್ರವಾಸಿ ಸ್ಥಳ ಮತ್ತು ತೆಹಸೀಲ್ ಸ್ಥಾನಮಾನದ ಒಂದು ಅಧಿಸೂಚಿತ ಪ್ರದೇಶ ಸಮಿತಿಯಾಗಿದೆ. ಇದು ಭಾರತದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅನಂತ್ನಾಗ್ ಜಿಲ್ಲೆಯಲ್ಲಿದೆ. ಜಮ್ಮುವಿನಿಂದ ಶ್ರೀನಗರದ ಕಡೆಗೆ ರಸ್ತೆಯಲ್ಲಿ ಪ್ರಯಾಣಿಸುವಾಗ ಸಿಗುವ ಕಾಶ್ಮೀರ ಕಣಿವೆಯ ಮೊದಲ ಪ್ರವಾಸಿ ತಾಣವೇ ವೇರಿನಾಗ್. ಇದು ಕಾಶ್ಮೀರ ಕಣಿವೆಯ ಪ್ರವೇಶ ಬಿಂದುವಿನಲ್ಲಿದೆ ಮತ್ತು ಇದನ್ನು ಕಾಶ್ಮೀರದ ಪ್ರವೇಶದ್ವಾರ ಎಂದೂ ಕರೆಯುತ್ತಾರೆ.
ಈ ಸ್ಥಳದ ಪ್ರಮುಖ ಪ್ರವಾಸಿ ಆಕರ್ಷಣೆಯೆಂದರೆ ವೇರಿನಾಗ್ ಚಿಲುಮೆ. ಇದಕ್ಕಾಗಿ ಈ ಸ್ಥಳಕ್ಕೆ ಈ ಹೆಸರಿಡಲಾಗಿದೆ. ವೇರಿನಾಗ್ ಬುಗ್ಗೆಯ ಸ್ಥಳದಲ್ಲಿ ಅಷ್ಟಭುಜಾಕೃತಿಯ ಕಲ್ಲಿನ ಹೊಂಡವಿದೆ ಮತ್ತು ಅದರ ಸುತ್ತಲೂ ಕಮಾನುದಾರಿಯಿದೆ. ಇವನ್ನು ಮುಘಲ್ ಚಕ್ರವರ್ತಿ ಜಹಾಂಗೀರ್ ಕ್ರಿ.ಶ 1620 ರಲ್ಲಿ ನಿರ್ಮಿಸಿದನು. ಈ ಬುಗ್ಗೆಯು ಎಂದಿಗೂ ಒಣಗುವುದಿಲ್ಲ ಅಥವಾ ಉಕ್ಕಿ ಹರಿಯುವುದಿಲ್ಲವಾದುದಕ್ಕೆ ಹೆಸರುವಾಸಿಯಾಗಿದೆ. ವೇರಿನಾಗ್ ಚಿಲುಮೆಯು ಝೇಲಮ್ ನದಿಯ ಪ್ರಮುಖ ಮೂಲವೂ ಆಗಿದೆ.[೧] ಅದರ ಸುತ್ತಲಿನ ವೇರಿನಾಗ್ ಬುಗ್ಗೆ ಮತ್ತು ಅದರ ಸುತ್ತಲಿನ ಮುಘಲ್ ಕಮಾನುದಾರಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಅಧಿಕೃತವಾಗಿ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಗುರುತಿಸಿದೆ.[೨]
ವೇರಿನಾಗ್ ಬುಗ್ಗೆಯು ಪರ್ವತದ ಒಂದು ಚಾಚುಭಾಗದ ಎತ್ತರದ ಕಡಿದಾದ ಇಳಿಜಾರಿನಿಂದ ಹೊರಹೊಮ್ಮುತ್ತದೆ. ವೇರಿನಾಗ್ ಬುಗ್ಗೆಯು ಮೂಲತಃ ಅನಿಯಮಿತ ಮತ್ತು ಆಕಾರವಿಲ್ಲದ ಕೊಳವಾಗಿತ್ತು. ಅದರಲ್ಲಿನ ವಿವಿಧ ಸ್ಥಳಗಳಿಂದ ನೀರು ಹೊರಬಂದು ಹರಡಿ ಸ್ವಲ್ಪ ಜವುಗುನೆಲವನ್ನು ರೂಪಿಸುತ್ತಿತ್ತು. ಚಕ್ರವರ್ತಿ ಜಹಾಂಗೀರ್ ಇದನ್ನು ನೋಡಿದನು ಮತ್ತು ಅದನ್ನು ಸುಧಾರಿಸಲು ತಕ್ಷಣ ನಿರ್ಧರಿಸಿದನು. ಅವನು ಅದರ ಸುತ್ತಲೂ ಶಿಲ್ಪಕಲೆಗಳ ಅಷ್ಟಭುಜಾಕೃತಿಯ ತೊಟ್ಟಿಯನ್ನು ನಿರ್ಮಿಸಿದನು.
ವೇರಿನಾಗ್ ಬುಗ್ಗೆಯ ಪಶ್ಚಿಮ ಮತ್ತು ದಕ್ಷಿಣದ ಗೋಡೆಗಳೊಳಗೆ ಎರಡು ಕಲ್ಲಿನ ಚಪ್ಪಡಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಪರ್ಷಿಯನ್ ಭಾಷೆಯಲ್ಲಿನ ಗದ್ಯವಿದ್ದು ಬುಗ್ಗೆಯನ್ನು ಹೊಗಳುತ್ತದೆ ಮತ್ತು ಕೊಳ ಹಾಗೂ ಕಾಲುವೆಯ ನಿರ್ಮಾಣದ ದಿನಾಂಕಗಳನ್ನು ಕೆತ್ತಲಾಗಿದೆ.