ವೈಶಾಲಿ ಕಾಸರವಳ್ಳಿ | |
---|---|
ಜನನ | ಏಪ್ರಿಲ್ ೧೨, ೧೯೫೨ ಮಹಾರಾಷ್ಟ್ರದ ಕೊಲ್ಲಾಪುರ |
ಸಾವು | ಸೆಪ್ಟೆಂಬರ್ ೨೭, ೨೦೧೦ |
ಶಿಕ್ಷಣ(s) | ರಂಗಭೂಮಿ, ಚಲನಚಿತ್ರ, ದೂರದರ್ಶನ ಕಲಾವಿದೆ |
ವೈಶಾಲಿ (ಏಪ್ರಿಲ್ ೧೨, ೧೯೫೨-ಸೆಪ್ಟೆಂಬರ್ ೨೭, ೨೦೧೦) ಕನ್ನಡ ಅಭಿನಯ ಕಲಾ ಲೋಕ ಕಂಡ ಮಹಾನ್ ಪ್ರತಿಭೆ. ರಂಗಭೂಮಿ, ಸಿನಿಮಾ, ಟಿ ವಿ ಕ್ಷೇತ್ರ ಮೂರರಲ್ಲೂ ಅಭಿನಯಿಸಿ ಪ್ರಶಂಸೆ ಪಡೆದು ಪ್ರಶಸ್ತಿ ಗೆದ್ದ ಪ್ರಥಮ ಕನ್ನಡ ನಟಿ ವೈಶಾಲಿ. ಹಯವದನ ಅಭಿನಯಕ್ಕಾಗಿ ಅಖಿಲ ಭಾರತ ವಿಮರ್ಶಕ ಒಕ್ಕೂಟದಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ರಂಗನಟಿ ಪ್ರಶಸ್ತಿ, ಆಕ್ರಮಣದ ಚಿತ್ರಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ, ತಾಯಿ ಸಾಹೇಬದ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ, ಕ್ಷಮಯಾ ಧರಿತ್ರಿ ಟಿ ವಿ ಧಾರಾವಾಹಿಗಾಗಿ ರಾಷ್ಟ್ರಮಟ್ಟದ ಪ್ರಶಂಸಾ ಪತ್ರ ಮುಂತಾದವು ವೈಶಾಲಿ ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಪ್ರಮುಖವಾದವು.
ವೈಶಾಲಿ ಎಂಬ ಅನನ್ಯ ಪ್ರತಿಭೆಯನ್ನು ನೆನೆದರೆ ಅವರು ನಮ್ಮೀ ಲೋಕದಿಂದ ಹೊರಗಿದ್ದಾರೆ ಎನಿಸುವುದೇ ಇಲ್ಲ. ಅವರ ಧ್ವನಿ ಇನ್ನೂ ಎಲ್ಲೋ ನಮ್ಮ ಕಿವಿಯಲ್ಲಿ, ಮನಸ್ಸುಗಳಲ್ಲಿ ಗುಂಯ್ ಗುಟ್ಟುತ್ತಲೇ ಇದೆ. ಅಮೆರಿಕ ಅಮೆರಿಕ ಚಿತ್ರದಲ್ಲಿ ‘ಭೂಮಿ ಒಲೆ ಮೇಲ್ ಹಾಲಿಟ್ಟಿದ್ದೀನಿ ನೋಡಮ್ಮಾ’ ಎಂದು ತನ್ನ ಮಗಳನ್ನು ಒಳಗೆ ಸಾಗಹಾಕಿ ಆಕೆಯ ಮದುವೆ ಮಾತನ್ನು ಆಡುವ ಒಂದು ರೀತಿಯ ಸಹಜತೆ ಇಂದೂ ನನ್ನಲ್ಲಿ ಬೆರಗು ಹುಟ್ಟಿಸುವಂತೆ ಬೇರು ಬಿಟ್ಟಿದೆ. ಪ್ರೊಫೆಸರ್ ಹುಚ್ಚೂರಾಯ, ಭೂತಯ್ಯನ ಮಗ ಅಯ್ಯು, ಹೊಂಬಿಸಿಲು, ಫಲಿತಾಂಶ, ಗಣೇಶನ ಮದುವೆ, ಕಿಟ್ಟು ಪುಟ್ಟು, ಗೌರಿ ಗಣೇಶ, ಆಕ್ರಮಣ, ಚಂದ್ರಮುಖಿ ಪ್ರಾಣಸಖಿ ಅಂತಹ ಹಲವಾರು ಚಿತ್ರಗಳಲ್ಲಿ ಅವರು ಲವಲವಿಕೆಯಿಂದ ಅಭಿನಯಿಸಿದ್ದು ನೆನೆಪಾಗುತ್ತದೆ. ಹಯವದನ, ಸಂಕ್ರಾಂತಿ ಅಂತಹ ನಾಟಕಗಳಲ್ಲಿ ಅವರು ಮೂಡಿ ಬೆಳೆದದ್ದು ಹವ್ಯಾಸಿ ರಂಗಭೂಮಿಯಲ್ಲಿನ ಬೆಳಕಾದರೆ, ಮಾಯಾಮೃಗ, ಮಾಲ್ಗುಡಿ ಡೇಸ್ ಕಿರುತರೆಯದ್ದು ಮತ್ತೊಂದು ಭವ್ಯತೆ. ಕಿರು ತೆರೆಯಲ್ಲಿ ನಿರ್ದೇಶಕಿಯಾಗಿ, ಬೆಳ್ಳಿ ತೆರೆಯಲ್ಲಿ ವಿನ್ಯಾಸಕಿಯಾಗಿ ಹೀಗೆ ವಿಧ ವಿಧವಾಗಿ ಕಲಾರಂಗದಲ್ಲಿ ಮೂಡಿಬಂದ ಅವರ ಪರಿ ಅದ್ವಿತೀಯವಾದದ್ದು. ಇವೆಲ್ಲವನ್ನೂ ಅವರು ಅತ್ಯಂತ ಸರಳವಾಗಿ, ಸಹಜವಾಗಿ ಯಾವುದೇ ತೋರ್ಪಡಿಕೆಯಿಲ್ಲದೆ ಸರಾಗವಾಗಿ ಮಾಡುತ್ತಿದ್ದರೆಂಬುದು ಒಂದು ಅನನ್ಯತೆಯೇ ಸರಿ.
ವೈಶಾಲಿಯವರು ೧೯೫೨. ಏಪ್ರಿಲ್ ೧೨ರಂದು ಜನಿಸಿದರು. ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ತಂದೆ 'ವೆಂಕಟರಾವ್ ಚಿಟ್ಟಿಗೋಪಿಕರ್' ಮಹಾರಾಷ್ಟ್ರದವರು.'ಉರ್ದು ಶಾಯಿರಿಪ್ರಿಯರು'. ಹುಟ್ಟಿದ್ದು 'ಕೊಲ್ಲಾಪುರ'ದಲ್ಲಿ. ತಾಯಿ 'ನಿರ್ಮಲ', ಕರ್ನಾಟಕದವರು. 'ಹಿಂದೂಸ್ತಾನಿ ಕರ್ನಾಟಕ ಸಂಗೀತ' ಕಲಿತಿದ್ದರು. ಹೀಗಾಗಿ ಬೆಳೆದದ್ದು ಓದಿದ್ದೆಲ್ಲಾ ಗುಲ್ಬರ್ಗಾದಲ್ಲಿನ 'ಬ್ರಹ್ಮ ಪುರ'ದ 'ತವರು ಮನೆ'ಯಲ್ಲಿ. ಬಡತನದಲ್ಲಿಯೇ ಅವರ ಜೀವನ ಸಾಗಿತ್ತು. ಕೆಲ ಕಾಲ 'ಗುಬ್ಬಿ ಕಂಪನಿ'ಯಲ್ಲಿ ತಂದೆಯವರು 'ಮ್ಯಾನೇಜರ್' ಆಗಿದ್ದರು. ಬಾಲ್ಯದಲ್ಲಿ 'ಗುಬ್ಬಿ ಕಂಪನಿ'ಯಿಂದ ಅವರಿಗೆ ನಾಟಕದ ಪರಿಚಯವಾಗಿದ್ದು. 'ದಶಾವತಾರ' ನಾಟಕದಲ್ಲಿ ಬರುವ ನಾಲ್ಕು 'ವೇದ ಶಿಶು'ಗಳ ಪೈಕಿ ಅವರೂ ಒಂದು ಶಿಶುವಾಗಿ ಪಾತ್ರ ಮಾಡಿದ್ದು ಉಂಟು. 'ಸಂತ ತುಕಾರಾಂ' ನಂತ ಭಕ್ತಿ ಪ್ರಧಾನ ಚಿತ್ರಗಳನ್ನೇ ಆಗಿನ ಕಾಲದಲ್ಲಿ ನೋಡಬೇಕಿತ್ತು. "ನಿಜ ಹೇಳಬೇಕೆಂದರೆ, ಶಾಲಾ ಕಾಲೇಜು ದಿನಗಳಲ್ಲಿ ನಾಟಕ ಮಾಡಿದ್ದು ಬಿಟ್ಟರೆ ಅಭಿನಯದ ಬಗ್ಗೆ ನನಗೆ ಗೊತ್ತಿರಲಿಲ್ಲ" ಎನ್ನುತ್ತಾರೆ, ವೈಶಾಲಿಯವರು. 'ಬಿಎಸ್ಸಿ ಪದವಿ' ಮುಗಿಸಿದ್ದ ಅವರು, "ನಟಿಯಾಗುವ ವಿಷಯ ಕನಸಿನಂತಿತ್ತೆಂದು" ಅವರು ನೆನೆಯುತ್ತಾರೆ.
೧೯೭೨ ರಲ್ಲಿ 'ವೈಶಾಲಿಯವರ ಇಡೀ ಕುಟುಂಬ ಗುಲ್ಬರ್ಗಾ ದಿಂದ ಬೆಂಗಳೂರಿಗೆ ವರ್ಗವಾಯಿತು. 'ಬಿ.ವಿ.ಕಾರಂತ'ರು ಸ್ನೇಹಿತರಾಗಿದ್ದರು. ಹಾಗಾಗಿ ಅವರು 'ಹವ್ಯಾಸಿ ರಂಗಭೂಮಿ'ಗೆ ಸೇರ್ಪಡೆಯಾದರು. ಆಗ ಬೆಂಗಳೂರಿನಲ್ಲಿ ಕಾರಂತರ ನಾಟಕದ ಅಲೆ ಶುರುವಾಗಿತ್ತು. 'ಟಿ.ಎಸ್.ನಾಗಾಭರಣ', 'ಕೋಕಿಲ ಮೋಹನ್', 'ಸುಂದರರಾಜ್', 'ರತ್ನಮಾಲಾ', 'ಟಿ.ಎಸ್.ರಂಗಾ' ಸೇರಿದಂತೆ 'ಬೆನಕ' (ಬೆಂಗಳೂರು ನಗರ ಕಲಾವಿದರ) ನಾಟಕ ತಂಡ'ವನ್ನು ಬಿ.ವಿ.ಕಾರಂತರು ಕಟ್ಟಿದರು. 'ಜೋಕುಮಾರಸ್ವಾಮಿ', 'ಹಯವದನ', 'ಸಂಕ್ರಾಂತಿ' ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದರು. "ನನಗೆ ಅಭಿನಯ ಕಲೆ ಅಂದ್ರೆ ಏನು ಎಂಬುದನ್ನು ಹೇಳಿಕೊಟ್ಟವರು ಕಾರಂತರು". "ಶಿಸ್ತು, ಶ್ರದ್ಧೆ, ಏಕಾಗ್ರತೆ, ಕ್ರಿಯಾಶೀಲತೆ, ಸಾಮಾಜಿಕ ಬದ್ಧತೆ ಗುಣಗಳನ್ನು ನಾನು ಕಲಿತದ್ದೇ ಇವರಿಂದ", ಇದು ವೈಶಾಲಿ ಕಾಸರವಳ್ಳಿಯವರ ಪ್ರತಿಕ್ರಿಯೆ.
'ಇವನ್ನು ವೈಶಾಲಿ ಕಾಸರವಳ್ಳಿಯವರ ಮಾತಿನಲ್ಲೇ ಕೇಳಿಸಿಕೊಂಡರೆ ರಸಾನುಭವದ ಸ್ವಾದ ಇನ್ನೂ ಹೆಚ್ಚು'. 'ಕಾರಂತರು ಮೊದಲು ನಮಗೆ ಹೇಳಿಕೊಟ್ಟ ಪಾಠ ಅಂದ್ರೆ ಸುತ್ತಮುತ್ತಲ ಪರಿಸರವನ್ನು ಅವಲೋಕನ ಮಾಡಿ ಎಂದು'. ನಮ್ಮ ಅಕ್ಕಪಕ್ಕವೇ ವೈವಿಧ್ಯಮಯ ಪಾತ್ರಗಳು ಇರುತ್ತವೆ. ಬದುಕಿನ ರಂಗ ಮಂದಿರದಲ್ಲಿ ಸಿಗುವವರೇ ನಿಜವಾದ ಕಲಾವಿದರು. ಅವರನ್ನು ನಾವು ನೋಡಿ ಅನುಕರಿಸಿದರೆ ಸಾಕು ಉತ್ತಮ ಕಲಾವಿದರಾಗಬಹುದು. ಪರಿಸರದ ಪಾಠಕ್ಕಿಂತ ಮತ್ತೊಂದು ಪಾಠಶಾಲೆ ಇಲ್ಲ" ಎನ್ನುತ್ತಿದ್ದರು ಕಾರಂತರು. ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪದ್ಮಿನಿ ಪಾತ್ರವೈಶಾಲಿಯವರದು. ಇದು ೧೪ ಭಾಷೆಗಳಲ್ಲಿ ಅನುವಾದಗೊಂಡ ನಾಟಕವಾಗಿತ್ತು. ಅರ್ಧಭಾಗ ಚೆನ್ನಾಗಿ ಅಭಿನಯಿಸಿದರೂ, ಉಳಿದರ್ಧ ಅಭಿನಯಿಸಲು ಕಷ್ಟವಾಗುತ್ತಿತ್ತು. ತುಂಬಾ ಸವಾಲಿನ ಪಾತ್ರವಾಗಿತ್ತು. ಇದರಲ್ಲಿನ ಉತ್ತಮ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ಹಾಗೆಯೇ ಪಿ.ಲಂಕೇಶರ 'ಸಂಕ್ರಾಂತಿ' ನಾಟಕದಲ್ಲಿ ವಿಭಿನ್ನ 'ಗೌಡ್ತಿ 'ಪಾತ್ರವನ್ನು ಆಯ್ದುಕೊಂಡಿದ್ದರು. ಇದರಲ್ಲಿ 'ಸುಂದರ ರಾಜ'ನದು 'ಶೂದ್ರ'ನ ಪಾತ್ರ. ನಾನು ಒಂದು ಸುಳ್ಳು ಹೇಳಿರುತ್ತೇನೆ. ಏನೇ ಸುಳ್ಳು ಹೇಳುತ್ತೀಯ ಎಂದು ನನ್ನ ಕೈ ಹಿಡಿದು ಜಗ್ಗಾಡಿದಾಗ ಬಳೆಗಳೆಲ್ಲ ಚೂರು ಚೂರಾಗಿ ರಕ್ತದ ಕಲೆಗಳಾಗುತ್ತಿತ್ತು". ಆದ್ರೂ ಆ ಪಾತ್ರದೊಳಗಿನ ಪರಕಾಯ ಪ್ರವೇಶದಿಂದಾಗಿ ನನಗೆ ಒಳ್ಳೆಯ ಹೆಸರು ತಂದಿತ್ತು. 'ಬೆನಕ ತಂಡ'ದಿಂದ ಒಂದು ತಿಂಗಳು ಡೆಲ್ಲಿ, ಬಾಂಬೆ, ಪೂನಾ, ಲಕ್ನೋ, ಗದಗ, ಧಾರವಾಡ, ಉಡುಪಿ ಮುಂತಾದೆಡೆ' ಆಲ್ ಇಂಡಿಯಾ ನಾಟಕದ ಟೂರ್' ಮಾಡಿದೆವು. ಟ್ರೈನ್‌ನಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದೆವು. ಇಡೀ ತಂಡವೆ ಒಂದು ಕುಟುಂಬ. ನಾವೆಲ್ಲ ಕುಟುಂಬದ ಸದಸ್ಯರಂತೆ ಇರುತ್ತಿದ್ದೆವು. ಇವತ್ತೇನು ಸೆಲಬ್ರೆಟಿಸ್ ಅನಿಸಿಕೊಂಡಿದ್ದಾರೋ ಅವರೆಲ್ಲ ಬೆನಕ ತಂಡದಲ್ಲಿ ಇದ್ದವರೇ. ನಾವು ಆಗ ಹಣಕ್ಕಾಗಿ ನಾಟಕ ಮಾಡುತ್ತಿರಲಿಲ್ಲ. ಎಲ್ಲೋ ಓಡಾಟದ ಖರ್ಚಿಗೆಂದು ಸ್ವಲ್ಪ ಹಣ ಕೊಡುತ್ತಿದ್ದರು. ವೃತ್ತಿ ಕಲಾವಿದೆಯಾದವಳಲ್ಲ, ಹವ್ಯಾಸಿ ರಂಗಭೂಮಿ ಕಲಾವಿದೆಯಾಗಿಯೇ. ಆಗ ಅಪ್ಪ ರಾತ್ರಿ ೯ ಗಂಟೆ ಒಳಗೆ ಮನೆ ಸೇರ್ಕೋಬೇಕು ಎಂಬ ತಾಕೀತು ಮಾಡಿದ್ದರು.
"ಆಗಿನ ಹೊಸ ಅಲೆಯ ನಾಟಕಗಳನ್ನು ನೋಡಲು ಮೈಸೂರಿನಿಂದ ಬೆಂಗಳೂರಿಗೆ ಸೈಕಲ್‌ನಲ್ಲಿ ಬಂದು ಹೋಗುವಂಥ ಪ್ರೇಕ್ಷಕರು ಇದ್ರು. ನಾಟಕ ಪ್ರೇಮಿಯಾಗಿದ್ದ ರಜನಿಕಾಂತ್ ಕೂಡ ನಿಮ್ಮ ಸಾಕಷ್ಟು ನಾಟಕಗಳನ್ನು ನೋಡಿದ್ದೇನೆ, ಉತ್ತಮ ಅಭಿನಯ ನಿಮ್ಮದು ಎಂದದ್ದು ಉಂಟು. ವಿಷ್ಣುವರ್ಧನ್ ಸಹ 'ಹಯವದನ' ನಾಟಕದಲ್ಲಿ ನನ್ನ ಜೊತೆ ಅಭಿನಯಿಸಲು ನಿಗದಿಯಾಗಿತ್ತು. ಆದರೆ ಅವರಿಗೆ ನಾಗರಹಾವು ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ನಾಯಕನಾಗಿ ಅಭಿನಯಿಸಲು ಅವಕಾಶ ನೀಡಿದ್ದರಿಂದ ವಿಷ್ಣು ಆ ಕಡೆ ಹೋದರು" ಎಂದು ನೆನೆಯುತ್ತಿದ್ದರು ವೈಶಾಲಿ.
ಬಣ್ಣದ ಬದುಕಿನ ಅನುಭವಗಳನ್ನು ಮೆಲುಕು ಹಾಕಿದ 'ವೈಶಾಲಿ ಕಾಸರವಳ್ಳಿ' ಯವರು 'ಗೂಡಿನಿಂದ ಗಗನಕ್ಕೆ' ಎಂಬ ಧಾರಾವಾಹಿಯನ್ನು 'ದೂರದರ್ಶನ'ಕ್ಕಾಗಿ ನಿರ್ದೇಶಿಸಿದವರು. 'ಶಂಕರ್‌ನಾಗ್' ನಿರ್ದೇಶನದ 'ಮಾಲ್ಗುಡಿ ಡೇಸ್' 'ಹಿಂದಿ ಧಾರಾವಾಹಿ'ಯಲ್ಲೂ ವಿಭಿನ್ನ ಪಾತ್ರ ಮಾಡಿದವರು. ಎಪ್ಪತ್ತರ ದಶಕದಲ್ಲಿ ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿದ ಪ್ರತಿಭೆಯೇ 'ವೈಶಾಲಿ ಕಾಸರವಳ್ಳಿ'. 'ಹವ್ಯಾಸಿ ರಂಗಭೂಮಿ' ಮತ್ತು 'ಸಿನಿಮಾ ನಟಿ'ಯಾಗಿ, 'ವಸ್ತ್ರವಿನ್ಯಾಸಕಿ'ಯಾಗಿ, 'ಕಂಠದಾನ ಕಲಾವಿದೆ'ಯಾಗಿ, 'ನಿರ್ದೇಶಕಿ'ಯಾಗಿ ತಮ್ಮ ಬಹುಮುಖ ಪ್ರತಿಭೆ ಮೆರೆದವರು. ರಾಷ್ಟ್ರಮಟ್ಟದಲ್ಲಿ ಕನ್ನಡಕ್ಕೆ ಪ್ರಶಸ್ತಿ, ಪುರಸ್ಕಾರಗಳನ್ನು ತಂದುಕೊಟ್ಟಿರುವ ಪ್ರಸಿದ್ಧ ನಿರ್ದೇಶಕ 'ಗಿರೀಶ್ ಕಾಸರವ'ಳ್ಳಿಯವರ ಬಾಳಸಂಗಾತಿಯಾಗಿದ್ದರೂ 'ತಮ್ಮದೆ ಸ್ವಂತಿಕೆ'ಯನ್ನು ಉಳಿಸಿಕೊಂಡು ಬಂದವರು. 'ಸತತ ಮೂರು ವರ್ಷಗಳ ಕಾಲ' ಗಿರೀಶ್ ಒಂದು ಚಿತ್ರಕ್ಕಾಗಿ ಚಿತ್ರಕಥೆ ಸಿದ್ಧಗೊಳಿಸಿದ ಬಳಿಕ ಸರಿತಪ್ಪುಗಳನ್ನು ಹೇಳುವ ಮೊದಲ 'ವಿಮರ್ಶಕಿ' ವೈಶಾಲಿಯವರೇ. ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಚಲನಚಿತ್ರಗಳು.
ಮುಂತಾದ ಚಿತ್ರಗಳ ಯಶಸ್ಸಿನ ಹಿಂದೆ ವೈಶಾಲಿ ಕಾಸರವಳ್ಳಿ ಇದ್ದಾರೆ ಎಂಬುದು ನಿಜಸ್ಥಿತಿ.
'ಪ್ರೇಮಾ ಕಾರಂತ್' ಅವರಿಂದ ವಸ್ತ್ರ ವಿನ್ಯಾಸ ಕಲೆಯನ್ನು ಪಾತ್ರದ ಹಿನ್ನೆಲೆ ಅರ್ಥೈಸಿಕೊಂಡು ಅದಕ್ಕೆ ಎಂಥ 'ವೇಷಭೂಷಣ ಬೇಕು' ಎಂದು ಊಹಿಸಿ ನಿರ್ಧರಿಸುವ ಸಾಮರ್ಥ್ಯ ವಸ್ತ್ರವಿನ್ಯಾಸಕರಿಗೆ ಇರಬೇಕು. ಇದೊಂದು ರೀತಿ ಪಾತ್ರಗಳ ಮರುಸೃಷ್ಟಿಯಾಗಿರುತ್ತದೆ. ತಾಯಿ ಸಾಹೇಬ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡಿದಾಗ ನಾನು ಅನುಸರಿಸಿದ ಮಾರ್ಗ ಇದೆಯಾಗಿತ್ತು. ಸ್ವತಂತ್ರಪೂರ್ವ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ನಾನು ಆಗಿನ ಕಾಲದಲ್ಲಿ ರವಿಕೆ ಹೇಗೆ ತೊಡುತ್ತಿದ್ದರು, ಬೆಂಡೋಲೆ ಹೇಗಿರುತ್ತಿತ್ತು, ಮೂಗುತಿ ಯಾವ ಆಕಾರದ್ದು, ತಲೆ ಯಾವ ರೀತಿ ಬಾಚುತ್ತಿದ್ದರು ಎಂಬುದನ್ನೆಲ್ಲ ಉತ್ತರ ಕರ್ನಾಟಕದವರ ಹಳೆಯ ಫೋಟೋಗಳನ್ನು ನೋಡಿ, ನನ್ನದೆ ಕಲ್ಪನೆಯ ಮೂಸೆಯಲ್ಲಿ ಪಕ್ವಗೊಳಿಸಿ ಜಯಮಾಲಾಗೆ ವಸ್ತ್ರವಿನ್ಯಾಸ ಮಾಡಿದೆ. ನಾಯಕಿ ಪಾತ್ರಕ್ಕಷ್ಟೆ ಅಲ್ಲ ಆಗ ಜಟಕ ಹೊಡೆಯುವವ ಹೇಗಿದ್ದ, ಆಗಿನ ಪರಿಸರಕ್ಕೆ ಹೊಂದಿಕೊಳ್ಳುವಂತ, ಅದೇ ಇತಿಹಾಸವನ್ನು ಮರುಕಳಿಸುವಂತೆ ನನ್ನದೆ ಪರಿಕಲ್ಪನೆಯಲ್ಲಿ ಇಡೀ ಚಿತ್ರದ ಕಲಾವಿದರಿಗೆ ವಸ್ತ್ರವಿನ್ಯಾಸ ಮಾಡಿದೆ. 'ಗಿರೀಶ್ ಕಾಸರವಳ್ಳಿ' ನಿರ್ದೇಶನದ 'ತಾಯಿ ಸಾಹೇಬ' ಚಿತ್ರದಲ್ಲಿನ 'ವಸ್ತ್ರ ವಿನ್ಯಾಸ'ಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು.
ನರಸಿಂಹರಾಜು ನಿರ್ಮಾಣದ, ಅಭಿನಯದ ಮೊದಲ ಚಿತ್ರ ಪ್ರೊ.ಹುಚ್ಚುರಾಯ. ವಿಷ್ಣು-ಮಂಜುಳ ಜೋಡಿಯ, ನರಸಿಂಹರಾಜು ತಂಗಿಯಾಗಿ ಭಾರ್ಗವಿ ನಾರಾಯಣ್ ಅಭಿನಯಿಸಿದ ಈ ಚಿತ್ರದಲ್ಲಿ ನನ್ನದು ಕತ್ರಿ ಕಮಲೆ ಎಂಬ ಕಾಮಿಡಿ ಪಾತ್ರ. ಕೇವಲ ನಾಯಕಿಯಾಗಿ ಅಭಿನಯಿಸೋದು ಅಷ್ಟೇ ಅಲ್ಲ, ಅಭಿನೇತ್ರಿಯಾದವಳಿಗೆ ಎಲ್ಲ ಪಾತ್ರವೂ ಮುಖ್ಯ ಎಂಬ ಕಾರಂತರ ಮಾತಿನಂತೆ ಸಿಕ್ಕ ಕಾಮಿಡಿ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ. ಇದಕ್ಕೆ ಪ್ರಶಸ್ತಿ ಕೂಡ ಬಂತು.
ಪ್ರೇಕ್ಷಕರು ಇವತ್ತಿಗೂ ನನ್ನ ಗುರುತಿಸೋದು ನನ್ನ ವಾಯ್ಸ್‌ನಿಂದ. ರಂಗಭೂಮಿಯಿಂದ ಸಿನಿಮಾಕ್ಕೆ ಬಂದ ಮೇಲೆ, ಫಲಿತಾಂಶ, ಗೀಜಗನಗೂಡು, ಆಸೆಗೊಬ್ಬ ಮೀಸೆಗೊಬ್ಬ, ಬಂಗಾರದ ಪಂಜರ, ದಾರಿ ತಪ್ಪಿದ ಮಗ, ಚಿರಂಜೀವಿ ಸುಧಾರಕ, ಹೊಂಬಿಸಿಲು, ಮಮತೆಯ ಮಡಿಲು, ಕಿಟ್ಟು ಪುಟ್ಟು ಸೇರಿದಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವೆ. 'ಅನ್ವೇಷಣೆ' ಯಲ್ಲಿ 'ಸ್ಮಿತಾ ಪಾಟೀಲ್' ಗೆ, 'ಬರಗೂರರ, 'ಸೂರ್ಯ'ದಲ್ಲಿ 'ರೋಹಿಣಿ ಹಟ್ಟಂಗಡಿ' ಗೆ, 'ಗಿರೀಶ್ ರ 'ಮನೆ' ಚಿತ್ರದಲ್ಲಿ 'ದೀಪ್ತಿ ನಾವಲ್‌ಗೆ 'ಕಂಠದಾನ' ಮಾಡಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದೆಯಾದ ವೈಶಾಲಿ ಅವರು ಸಿನಿಮಾವೊಂದನ್ನು ನಿರ್ದೇಶಿಸಬೇಕೆಂದು ಎಂದು ಕನಸು ಕಂಡಿದ್ದರು. ಆದರೆ ಚಿತ್ರವನ್ನು ನಿರ್ದೇಶಿಸಬೇಕು ಎಂಬ ಅವರ ಆಸೆ ಕಡೆಗೂ ನೆರವೇರದ್ದು ವಿಧಿ ವೈಚಿತ್ರ್ಯ. ಹಿಂದಿ ಮತ್ತು ಮರಾಠಿಯ ಕೆಲವು ನಾಟಕಗಳನ್ನು ವೈಶಾಲಿ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.
" ಗಿರೀಶ್ ಮೊದಲು ಪರಿಚಯವಾಗಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿಯೇ. ಬಿ.ವಿ. ಕಾರಂತರ ನಾಟಕಗಳ ಮೂಲಕ. ಕಾರಂತರ 'ಚೋಮನದುಡಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು 'ಗಿರೀಶ್'. ನನಗಾಗ ಇವರು ಕಂಡಿದ್ದು ನಾಚಿಕೆ ಸಂಕೋಚದ ಮುದ್ದೆಯ ಚಿಕ್ಕ ಹುಡುಗನ ತರಹ". "ಬಹುಶಃ ನಮ್ಮಿಬರ ತದ್ವರುದ್ಧದ ಸ್ವಭಾವಗಳೇ ಪರಸ್ಪರ ಆಕರ್ಷಣೆಗೆ ಕಾರಣ ಅಂತ ತೋರುತ್ತದೆ. ಅವರೊಬ್ಬ ಬುದ್ಧಿವಂತ, ಡೀಸೆಂಟ್‌ಬಾಯ್". "ನಾಟಕ, ಸಿನಿಮಾ ಅಂತ ಗೀಳಿರುವ ಈ ಹುಡುಗನಿಗೆ ನನ್ನ ಮಗಳು ಕೊಟ್ಟರೆ, ಜೀವನ ನಿರ್ವಹಣೆ ಹೇಗೆ ಎಂಬ ಭಯ, ಆತಂಕ ತಂದೆಗೆ ಇತ್ತು". "ಕಾರಂತರು ಗಿರೀಶ್ ಪ್ರತಿಭೆ ಬಗ್ಗೆ ಹೇಳಿದಾಗ ತಂದೆಗೆ ಧೈರ್ಯ ಬಂತು". "ಹಾಗಾಗಿ ೧೯೭೮ ರಲ್ಲಿ ನಮ್ಮ ಮದುವೆಯಾಯಿತು". "ಮಗ 'ಅಪೂರ್ವ', ಮಗಳು 'ಅನನ್ಯ' ಹುಟ್ಟಿದರು. ಮಗನಿಗೆ ನಿರ್ದೇಶನದ ಕಡೆ ಒಲವಿದ್ದರೆ, ಮಗಳಿಗೆ ನಟನೆಯಲ್ಲಿ ಆಸಕ್ತಿ".
“ದರ್ಶನಗಳು ವೈಶಾಲಿಗೆ ಸಿಕ್ಕಿದ್ದೇ ಕಾರಂತರ ಮುಖೇನ. ಮುಂದೆ ರಂಗಭೂಮಿಯಲ್ಲಿ ಸಿನಿಮಾ, ಟಿ ವಿ ರಂಗದಲ್ಲಿ ವೈಶಾಲಿಯ ಪಾತ್ರ ನಿರ್ವಹಣೆ, ಪುಟಗಳ ಮೇಲಿದ್ದ ಸಂಭಾಷಣೆಯನ್ನು ಮಾತುಗಳಾಗಿಸುವ ಪರಿ, ಪಾತ್ರಕ್ಕೆ ಜೀವ ತುಂಬುವ ವಿಧಾನ, ಅದಕ್ಕೊಂದು ವ್ಯಕ್ತಿ ವೈಶಿಷ್ಟ್ಯ ಮೆರೆಸುವ ಕ್ರಮ ಇವು ಪ್ರಶಂಸೆಗೆ ಪಾತ್ರವಾಗಿದ್ದರೆ, ಅದಕ್ಕೆಲ್ಲಾ ರಂಗಭೂಮಿ ಒದಗಿಸಿದ ಈ ಭದ್ರ ಬುನಾದಿಯೇ ಕಾರಣ. ರಂಗಭೂಮಿ, ಸಿನಿಮಾ, ಟಿ ವಿ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಸೊಗಸು ಹೊರಹೊಮ್ಮುವಂತೆ ಸಂಭಾಷಣೆ ಹೇಳಬಲ್ಲವರು ಕನ್ನಡದಲ್ಲಿ ಬೆರಳೆಣಿಕೆಯ ನಟ–ನಟಿಯರು ಮಾತ್ರ. ವೈಶಾಲಿ ಅವರಲ್ಲೊಬ್ಬಳು ಎನ್ನುವುದು ನನ್ನ ಅಭಿಪ್ರಾಯ” ಎಂದು ಗಿರೀಶ್ ಕಾಸರವಳ್ಳಿ ತಮ್ಮ ಪತ್ನಿಯ ಬಗ್ಗೆ ಗೌರವಯುತವಾಗಿ ಬರೆದಿದ್ದಾರೆ. ಇದು ವೈಶಾಲಿ ಅವರ ಬಗೆಗಿನ ಕನ್ನಡ ಕಲಾಭಿಮಾನಿಗಳ ಹೃದ್ಭಾವವೂ ಹೌದು.
“ಧಾರವಾಡದ ಕನ್ನಡವಾಗಲಿ, ಕುಂದಾಪುರ ಮಂಗಳೂರಿನ ಕನ್ನಡವೇ ಆಗಲಿ, ಒಳನಾಡ ಕನ್ನಡವಾಗಲಿ, ಗ್ರಾಂಥಿಕ ಕನ್ನಡವಾಗಲಿ, ಆ ಪ್ರಾದೇಶಿಕ ಸೊಗಸನ್ನು ಸವಿದು, ಎಲ್ಲ ಸೂಕ್ಷ್ಮತೆಗಳನ್ನು ವೈಶಾಲಿ ತೆರೆದಿಡುತ್ತಿದ್ದರು. ನಾಯಿ ನೆರಳು ಚಿತ್ರದ ನಾಗಲಕ್ಷ್ಮಿ ಪಾತ್ರಕ್ಕೆ ವೈಶಾಲಿಯವರು ಕಂಠದಾನ ಮಾಡುವಾಗ, ಅವರು ಹವ್ಯಕ ಕನ್ನಡವನ್ನು ಕೇಳಿದ್ದೇ ಅಪರೂಪವಾದರೂ ಇವರು ಹವ್ಯಕರೇ ಇರಬೇಕು ಎನ್ನುವಷ್ಟು ಲೀಲಾಜಾಲವಾಗಿ ಮಾತನಾಡಿ ಡಬ್ಬಿಂಗ್ ಸಮಯದಲ್ಲಿ ಬಾಷೆಯ ಉಚ್ಚಾರಣೆಯ ಉಸ್ತುವಾರಿ ಮಾಡಲು ಬಂದಿದ್ದ ಭಾಷಾ ತಜ್ಞರನ್ನು ಬೆರಗು ಮಾಡಿದ್ದರು” ಎಂದು ಗುರುತಿಸುತ್ತಾರೆ ವೈಶಾಲಿ ಅವರ ಆಪ್ತ ಗೆಳತಿಯಾಗಿದ್ದ ಬರಹಗಾರ್ತಿ ವೈದೇಹಿ.
ಕನ್ನಡ ಚಿತ್ರರಂಗದಲ್ಲಿ ಗಿರೀಶ್ ಕಾಸರವಳ್ಳಿ ಅವರ ಅನನ್ಯ ಸಾಧನೆಗಳನ್ನು ತಿಳಿಯದಿರುವವರೇ ಇಲ್ಲ. ವೈಶಾಲಿ ಅವರು ಗಿರೀಶರ ಕಾರ್ಯಕ್ಷೇತ್ರಕ್ಕಿಂತ ವಿಭಿನ್ನವಾದ ರಂಗಭೂಮಿ ಮತ್ತು ಕಮರ್ಷಿಯಲ್ ಸಿನಿಮಾ ರಂಗಗಳಲ್ಲಿ ಹೆಚ್ಚು ಕಾಣಿಸಿಕೊಂಡವರು. ಅಂದರೆ ಇವರಿಬ್ಬರೂ ವಿಭಿನ್ನ ರೇಖೆಗಳಿಂದ ತಮ್ಮನ್ನು ಕಾಣಿಸಿಕೊಂಡವರೆ? ಎಂಬ ಪ್ರಶ್ನೆ ಸಾಮಾನ್ಯ ನೋಟಕ್ಕೆ ಕಾಣಬರುತ್ತದೆ. ಈಗಾಗಲೇ ಹೇಳಿದಂತೆ ವೈಶಾಲಿ ಗಿರೀಶರ ಆಕ್ರಮಣದಲ್ಲಿ ನಟಿಯಾಗಿ, ಅವರ ಹಲವಾರು ಚಿತ್ರ ಪಾತ್ರಗಳ ಧ್ವನಿಯಾಗಿ, ಅವರ ಬಹುತೇಕ ಚಿತ್ರಗಳ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನೂ ಗಳಿಸಿದವರು. ಬಣ್ಣದ ವೇಷ, ಮನೆ, ಕ್ರೌರ್ಯ, ತಾಯಿ ಸಾಹೇಬ ಮುಂತಾದ ಚಿತ್ರಗಳನ್ನು ಹೆಸರಿಸುವ ಗಿರೀಶ್ ಹೇಳುತ್ತಾರೆ “ಈ ಚಿತ್ರಗಳಲ್ಲಿ ನನ್ನ ಕೊಡುಗೆ ಏನು, ವೈಶಾಲಿ ಕೊಡುಗೆ ಏನು? ಎಂದು ಬಿಡಿಸಿ ಹೇಳಲಾಗುವುದಿಲ್ಲ ಎಂದೇ ನನಗನ್ನಿಸುತ್ತದೆ. ಕೆಲವೊಂದು ಚಿತ್ರಗಳಲ್ಲಿ ಆಕೆಯ ಕೊಡುಗೆಯೇ ಹೆಚ್ಚು”. ಇದು ಒಂದು ರೀತಿಯಲ್ಲಿ ಗಿರೀಶ್ ಮತ್ತು ವೈಶಾಲಿ ಜೋಡಿಯಲ್ಲಿದ್ದ ಅನ್ಯೋನ್ಯತೆ, ಪೂರಕತೆ, ಪಾರಸ್ಪರಿಕತೆಗಳ ಜೊತೆಗೆ ವೈಶಾಲಿ ಅವರಿಗಿದ್ದ ವಿಶಾಲವಾದ ಸಾಮರ್ಥ್ಯವನ್ನು ಸಹಾ ಮನದಟ್ಟು ಮಾಡಿಕೊಡುತ್ತದೆ.
ರಂಗಭೂಮಿ, ಸಿನಿಮಾ, ಟಿ ವಿ ಕ್ಷೇತ್ರ ಮೂರರಲ್ಲೂ ಅಭಿನಯಿಸಿ ಪ್ರಶಂಸೆ ಪಡೆದು ಪ್ರಶಸ್ತಿ ಗೆದ್ದ ಪ್ರಥಮ ಕನ್ನಡ ನಟಿ ವೈಶಾಲಿ. ಹಯವದನ ಅಭಿನಯಕ್ಕಾಗಿ ಅಖಿಲ ಭಾರತ ವಿಮರ್ಶಕ ಒಕ್ಕೂಟದಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ರಂಗನಟಿ ಪ್ರಶಸ್ತಿ, ಆಕ್ರಮಣದ ಚಿತ್ರಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ, ಆಕ್ರಮಣದ ವಿನ್ಯಾಸಕ್ಕಾಗಿ ರಾಷ್ಟ್ರ ಪ್ರಶಸ್ತಿ, ತಾಯಿ ಸಾಹೇಬದ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ, ಕ್ಷಮಯಾ ಧರಿತ್ರಿ ಟಿ ವಿ ಧಾರಾವಾಹಿಗಾಗಿ ರಾಷ್ಟ್ರಮಟ್ಟದ ಪ್ರಶಂಸಾ ಪತ್ರ ಮುಂತಾದವು ವೈಶಾಲಿ ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಪ್ರಮುಖವಾದವು.
ದೊಡ್ಡ ಕಹಿಘಟನೆ ಅಂದ್ರೆ ೨೦೦೪ರಿಂದ ನನ್ನ ಆರೋಗ್ಯ ಕೈ ಕೊಟ್ಟಿದ್ದು. ಮೂರು ಸಲ 'ಕೋಮ ಸ್ಥಿತಿ' ತಲುಪಿದೆ. ಇನ್ನೇನೂ ಮುಗಿದೆ ಹೋಯಿತು ಎಂಬ ಹಂತದಿಂದಲೂ 'ಫೀನಿಕ್ಸ್ ಪಕ್ಷಿ' ತರಹ ಸಾವೆಂಬ ಬೂದಿಯಿಂದ ಎದ್ದು ಬಂದಿರುವೆ. ಹೀಗೆ ನನಗೆ ಮೂರು ಬಾರಿ ಪುನರ್‌ಜನ್ಮ ಸಿಕ್ಕಿದೆ. ಮಗನ, ಮಗಳ ಮದುವೆ ನೋಡಿ ಬಿಟ್ಟರೆ ನನಗೆ ನಿಶ್ಚಿಂತೆ. ಲಿವರ್ ಸಮಸ್ಯೆಯಿಂದ ನಿತ್ಯವು ಬಳಲುತ್ತಿದ್ದೇನೆ. ಇದಕ್ಕೆ ಪರಿಹಾರ ಎಂಬಂತೆ ಸಿನಿಮಾ ನಾಟಕಗಳಿಗಷ್ಟೆ ಹಾಸ್ಯವನ್ನು ನಾನು ಸಿಮೀತ ಮಾಡಿಕೊಂಡವಳಲ್ಲ. ಮನೆಯಲ್ಲಿ 'ಮಿಮಿಕ್ರಿ' ಮಾಡಿ ನಗಿಸುತ್ತಾ ನಗುವುದನ್ನು ಚಿಕ್ಕ ವಯಸ್ಸಿನಿಂದಲು ನಾನು ರೂಢಿಸಿಕೊಂಡು ಬಂದವಳು. ಹಾಗಾಗಿ 'ಹಾಸ್ಯ' ನನ್ನ ಜೀವನದ ಅವಿಭಾಜ್ಯ ಅಂಗ. ಹಾಸ್ಯ ಪ್ರಜ್ಞೆಯಿಂದಲೆ ಈ ತರಹದ ಎಲ್ಲಾ ನೋವುಗಳನ್ನು ಮರೆಯುತ್ತಿದ್ದರು.
ಮೂರೂವರೆ ದಶಕಗಳಿಂದ ಕಲೆಯ ನಂಟನ್ನು ಉಳಿಸಿಕೊಂಡೆ ಬಂದಿರುವ ಇವರಿಗೆ ಕಳೆದ ಐದು ವರ್ಷಗಳಿಂದ ತೀವ್ರ ಅನಾರೋಗ್ಯ ಕಾಡಿದ್ದು ಉಂಟು. ನಾಲ್ಕು ವರ್ಷಗಳ ಹಿಂದೆಯೇ ಶ್ರೀಮತಿ, ಕಾಸರವಳ್ಳಿಯವರ ಅವರ 'ಕಿಡ್ನಿ' ವೈಫಲ್ಯವಾಗಿತ್ತು. ಮೂರುಬಾರಿ ಪುನರ್‌ಜನ್ಮ ಸಿಕ್ಕಿದೆ. ನಾಲ್ಕನೆ ಬಾರಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಅವರನ್ನು ಚಿಕಿತ್ಸೆಗಾಗಿ ಒಂದು ವಾರದ ಹಿಂದಷ್ಟೆ ಜಯನಗರದ "ಮಣಿಪಾಲ್ ಆಸ್ಪತ್ರೆ" ಗೆ ದಾಖಲಿಸಲಾಗಿತ್ತು. ಆದರೆ ಈಬಾರಿ ಅವರು ಗುಣಮುಖರಾಗಿ ಮನೆಗೆ ಬರಲೇಯಿಲ್ಲ. ಸೋಮವಾರ (ಸೆಪ್ಟೆಂಬರ್, ೨೭) ೨೦೧೦ ಸಂಜೆ ಸುಮಾರು ೫-೩೦ ರ ಸಮಯದಲ್ಲಿ ಸಂಜೆ ವಿಧಿವಶರಾಗಿದ್ದಾರೆ. ಮೃತರು, ಇಬ್ಬರು ಮಕ್ಕಳಾದ ಅನನ್ಯ ಕಾಸರವಳ್ಳಿ, ಅಪೂರ್ವ ಕಾಸರವಳ್ಳಿ ಹಾಗೂ ಪತಿ, ಗಿರೀಶ್ ಕಾಸರವಳ್ಳಿ ಯವರನ್ನು ಅಗಲಿದ್ದಾರೆ.