ಶಲ್ಯ (ಮಹಾಭಾರತದ ಪಾತ್ರ) | |
---|---|
ಮಾಹಿತಿ | |
ಕುಟುಂಬ | (ಮಾದ್ರಿ - ತಂಗಿ) |
ಮಕ್ಕಳು | ರುಕುಮಾಂಗದ, ರುಕುಮಾರತ ಮತ್ತು ಮಾದ್ರಂಜಯ. |
ಸಂಬಂಧಿಕರು | ನಕುಲ ಮತ್ತು ಸಹದೇವ (ತಂಗಿಯ ಮಕ್ಕಳು), ಪಾಂಡು (ಭಾವ) |
ಶಲ್ಯನು ಮದ್ರ ದೇಶದ ರಾಜ, ನಕುಲ ಸಹದೇವರ ತಾಯಿಯಾದ ಮಾದ್ರಿಯ ಅಣ್ಣ. ಇವನು ಋತಾನರಾಜನ ಮಗ. ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ. ಕುಂತಿಯ ಸ್ವಯಂವರದಲ್ಲಿ ಸೋತು ಪಾಂಡುವಿಗೆ ಕುಂತಿಯನ್ನು ಬಿಟ್ಟುಕೊಟ್ಟ. ಶಲ್ಯನು ಗದಾ ಯುದ್ಧದಲ್ಲಿ ದೃಢ ಎದುರಾಳಿಯಾಗಿದ್ದನು. ಈತ ಯುದ್ಧ ವಿದ್ಯೆಯಲ್ಲಿ ನಿಪುಣ. ಮಲ್ಲಯುದ್ಧದಲ್ಲಿ ಈತನಿಗೆ ಸರಿಸಾಟಿಯೆಂದರೆ ಭೀಮ ಒಬ್ಬನೇ. ಈತ ದ್ರೌಪದಿಯ ಸ್ವಯಂವರದ ಕಾಲದಲ್ಲಿ ಅರ್ಜುನ ಮತ್ಸ್ಯಯಂತ್ರ ಭೇದಿಸಿದಾಗ ದುರ್ಯೋಧನಾದಿಗಳೊಡನೆ ಸೇರಿ ಪಾಂಡವರ ಮೇಲೆ ಕಲಹಕ್ಕಿಳಿದ; ಭೀಮನಿಂದ ಪರಾಜಿತನಾದ.
ಒಂದು ದಿನ ಶಲ್ಯ ರಾಜ ತನ್ನ ಸೈನ್ಯದೊಂದಿಗೆ ಹಸ್ತಿನಾಪುರಕ್ಕೆ ಹೋಗುವಾಗ, ಪಾಂಡು ರಾಜನು ನೋಡಿ ಅವನನ್ನು ಮಾತನಾಡಿಸುತ್ತಾನೆ. ಶಲ್ಯ ರಾಜನ ಸಾಮಾನ್ಯ ಮಾತುಗಳಿಂದ ಪ್ರೇರಣೆಗೊಂಡ ಪಾಂಡು ರಾಜ ಶಲ್ಯನೊಡನೆ ಸ್ನೇಹ ಬೆಳಸಿ ತನ್ನ ಆಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಭೀಷ್ಮನಿಗೆ ಶಲ್ಯ ಮತ್ತು ಅವನ ಸುಂದರ ಸಹೋದರಿಯಾದ ಮಾದ್ರಿಯ ಬಗ್ಗೆ ಗೊತ್ತಿದ್ದ ಕಾರಣ, ಪಾಂಡುರಾಜನ ಜೊತೆ ಮದುವೆ ಮಾಡಿಸಲು ನಿರ್ಧರಿಸಿ, ಶಲ್ಯನ ಜೊತೆ ಮಾತನಾಡುತ್ತಾನೆ. ಶಲ್ಯನು ಇದಕ್ಕೆ ಒಪ್ಪಿದ ಕಾರಣ ಚಿನ್ನ ಮತ್ತು ರತ್ನಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸುತ್ತಾನೆ.[೧][೨][೩]
ವರ್ಷಗಳು ಕಳೆದಂತೆ ಮಾದ್ರಿಯು ತನ್ನ ಪತಿಯ ಸಾವಿಗೆ ತಾನೇ ಕಾರಣವೆಂಬ ನೋವಿನಿಂದ ಸಹಗಮನ ಮಾಡಿಕೊಂಡಳು. ಆಗ ಶಲ್ಯರಾಜ, ನಕುಲ ಮತ್ತು ಸಹದೇವರನ್ನು ಕರೆದು ಉತ್ತರಾಧಿಕಾರಿಯಾಗುವಂತೆ ಆಶಿಸುತ್ತಾನೆ . ನಕುಲ ಮತ್ತು ಸಹದೇವರ ೧೮ನೇ ಜನ್ಮದಿನದಂದು, ಶಲ್ಯ ರಾಜ “ನಕುಲ ಮತ್ತು ಸಹದೇವರು ಹಸ್ತಿನಾಪುರದ ಸಿಂಹಾಸನಕ್ಕೆ ಕಾಯುವ ಬದಲಿಗೆ ಮದ್ರದ ರಾಜರಾಗುತ್ತಾರೆ” ಎಂದು ಹೇಳುತ್ತಾನೆ.
ಶಲ್ಯ ರಾಜನಿಗೆ ಸ್ವಂತ ಮಕ್ಕಳಿದ್ದರು ಕೂಡ, ನಕುಲ ಮತ್ತು ಸಹದೇವರು ದೇವತೆಯರ ಮಕ್ಕಳೆಂದು ತನ್ನ ರಾಜ್ಯದ ಉತ್ತರಾಧಿಕಾರಿಯಾಗಿಸಲು ಇಷ್ಟಪಡುತ್ತಾನೆ. ಆದರೆ ನಕುಲ ಮತ್ತು ಸಹದೇವರನ್ನು ಕುಂತಿ ಮಾತೆ ತನ್ನ ಸ್ವಂತ ಮಕ್ಕಳಂತೆಯೂ ಮತ್ತು ಧರ್ಮರಾಯ, ಭೀಮ, ಅರ್ಜುನರು ಸ್ವಂತ ತಮ್ಮಂದಿರಂತೆಯೂ ನೋಡಿಕೊಳ್ಳುತ್ತಿದ್ದ ಕಾರಣ, ಉತ್ತರಾಧಿಕಾರಿಯಾಗಲು ಒಪ್ಪದೆ, ಶಲ್ಯ ರಾಜನಿಗೆ "ನಿನ್ನ ಮಕ್ಕಳನ್ನೆ ಉತ್ತರಾಧಿಕಾರಿಯಾಗಿ ಮಾಡು” ಎಂದು ಹೇಳುತ್ತಾರೆ. ಶಲ್ಯ ರಾಜ ಅದಕ್ಕೆ ಒಪ್ಪದೇ ಇದ್ದಾಗ, ನಕುಲ ಮತ್ತು ಸಹದೇವರು "ನಾವು ರಾಜ್ಯಾಡಳಿತವನ್ನು ಸ್ವೀಕರಿಸಿದರು ಕೂಡ ಪಾಂಡವರ ಜೊತೆ ಇದ್ದುಕೊಂಡು ರಾಜ್ಯಾಡಳಿತ ಮಾಡಲು ಅನುಮತಿ ಇದ್ದರೆ ಮಾತ್ರ ಉತ್ತರಾಧಿಕಾರಿಯಾಗುತ್ತೇವೆ" ಎಂದು ಹೇಳುತ್ತಾರೆ.[೪]
ಶಲ್ಯ ರಾಜನು ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ನೆರವಾಗಲು ತನ್ನ ಸೈನ್ಯವನ್ನು ಕರೆದುಕೊಂಡು ಬರುತ್ತಿರುತ್ತಾನೆ. ಸಂಚರಿಸುವಾಗ ಸೈನ್ಯವು ಹಸಿವು ಮತ್ತು ದಣಿವಿಗೆ ಒಳಗಾಗುತ್ತದೆ, ಇದನ್ನು ತಿಳಿದ ದುರ್ಯೋಧನನು ಶಲ್ಯನ ಸೈನ್ಯವನ್ನು ತನ್ನ ಕಡೆಗೆ ಪಡೆಯಲು ಕಪಟದಿಂದ, ತಾನು ಆಹಾರ ಮತ್ತು ವಿರಾಮದ ನೆರವಿಗೆ ಬರುತ್ತಿದ್ದೇನೆ ಎಂದು ತಿಳಿಯಗೊಡದೆ ತನ್ನ ಅಧಿಕಾರಿಗಳನ್ನು ಮುಂದಿಟ್ಟುಕೊಂಡು, ಧರ್ಮರಾಯನು ಆಹಾರ ಮತ್ತು ವಿರಾಮಕ್ಕೆ ನೆರವನ್ನು ಒದಗಿಸುತ್ತಿದ್ದಾನೆ ಎಂಬಂತೆ ವರ್ತಿಸುತ್ತಾನೆ. ಕೊನೆಗೆ ತನ್ನ ಅಧಿಕಾರಿಯಿಂದ ಇಂತಹ ಉಪಕಾರ ಮಾಡಿದವರಿಗೆ ನಿನ್ನ ಉಡುಗೊರೆ ಏನು ಎಂದು ಕೇಳಿಸುತ್ತಾನೆ. ಶಲ್ಯ ರಾಜ ಈ ರೀತಿಯ ಉಪಚಾರ ಮಾಡುವ ಭಾವನೆ ಇರುವುದು ಯುಧಿಷ್ಠಿರನಿಗೆ ಮಾತ್ರ, ಅವನೇ ಈ ಎಲ್ಲಾ ಉಪಚಾರ ಮಾಡಿರುವುದು ಎಂದು ಭಾವಿಸಿ, ಇಂತಹ ಆತಿಥ್ಯಕ್ಕೆ ಕಾರಣರಾದ ಧರ್ಮಾತ್ಮರು ಯಾರೋ ಅವರಿಗೆ ಯುದ್ಧದಲ್ಲಿ ನೆರವಾಗುತ್ತೇನೆ ಎಂದು ಮಾತುಕೊಡುತ್ತಾನೆ. ನಂತರ ದುರ್ಯೋಧನ ಶಲ್ಯನ ಮುಂದೆ ಬಂದು ತಾನೇ ಈ ಆತಿಥ್ಯಕ್ಕೆ ಕಾರಣ ಎಂದು ಹೇಳುತ್ತಾನೆ. ಮನನೊಂದ ಶಲ್ಯ, ಬೇರೆ ದಾರಿ ಇಲ್ಲದೆ ಕೌರವರ ಕಡೆ ಯುದ್ಧ ಮಾಡಬೇಕಾಗುತ್ತದೆ.
ವಿಷಯವನ್ನು ತಿಳಿದ ನಕುಲ ಮತ್ತು ಸಹದೇವರು ಶಲ್ಯರಾಜನನ್ನು ನಿಂದಿಸಲು ಮುಂದಾದಾಗ ಯುಧಿಷ್ಠಿರ ಸಮಾಧಾನ ಪಡಿಸಿ, ಶಲ್ಯ ರಾಜನಿಗೆ “ನೀನು ನಿಷ್ಠೆಯಿಂದ ಕೌರವರ ಕಡೆ ಯುದ್ಧಮಾಡು” ಎಂದು ಹೇಳುತ್ತಾನೆ.
ಯುದ್ಧದಲ್ಲಿ ಅರೆಮನಸ್ಸಿನಿಂದ ಭಾಗವಹಿಸಿದರೂ ಶಲ್ಯನು ಉತ್ತರಕುಮಾರನೂ ಸೇರಿದಂತೆ ಹಲವಾರು ವೀರರನ್ನು ಕೊಲ್ಲುತ್ತಾನೆ. ಯುದ್ಧಭೂಮಿಯಲ್ಲಿ ಅಭಿಮನ್ಯುವನ್ನು ಶಲ್ಯ ಎದುರಿಸುವ ಪ್ರಸಂಗದಲ್ಲಿ ಅವನ ಮೇಲೆ ಒಂದು ಅಸ್ತ್ರವನ್ನು ಪ್ರಯೋಗಿಸಿದ. ಅಭಿಮನ್ಯು ಅದನ್ನು ತಡೆದು ಶಲ್ಯನ ಕಡೆಗೆ ಎಸೆದಾಗ ಶಲ್ಯನ ಸಾರಥಿ ಸತ್ತ. ಭೀಮನಿಂದ ಶಲ್ಯ ಪರಾಜಿತನಾದರೂ ಪುನಃ ಕೆಲವೇ ಕ್ಷಣದಲ್ಲಿ ಎಚ್ಚೆತ್ತು ಪಾಂಡವರಲ್ಲಿದ್ದ 25 ಚೇದಿ ವೀರರನ್ನು ಸಂಹರಿಸಿದ.