ಶಿಗ್ಗಾಂವಿ | |
---|---|
ಪಟ್ಟಣ | |
Country | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಹಾವೇರಿ |
ಸರ್ಕಾರ | |
• ಎಂಎಲ್ಎ | ಬಸವರಾಜ ಬೊಮ್ಮಾಯಿ |
Elevation | ೬೦೧ m (೧,೯೭೨ ft) |
Population (೨೦೦೧) | |
• Total | ೨೪೩೧೮ |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 |
ಪಿನ್ ಕೋಡ್ | ೫೮೧೨೦೫ |
Area code(s) | ೦೮೩೭೮ |
ವಾಹನ ನೋಂದಣಿ | ಕೆಎ೨೭ |
ಜಾಲತಾಣ | www |
ಶಿಗ್ಗಾಂವ ಅಥವಾ ಶಿಗ್ಗಾಂವಿ ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಇದು ಕನ್ನಡದ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫಶಿವಯೊಗಿಗಳು ಜನಿಸಿದ ಸ್ಥಳ ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಈ ತಾಲೂಕಿನಲ್ಲಿದೆ.
ಶಿಗ್ಗಾಂವಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಧಾರವಾಡದ ದಕ್ಷಿಣಕ್ಕೆ 65 ಕಿಮೀ ದೂರದಲ್ಲಿ, ಯಲವಗಿ ರೈಲುನಿಲ್ದಾಣಕ್ಕೆ 14 ಕಿಮೀ ದೂರದಲ್ಲಿ ಬೆಂಗಳೂರು-ಬೆಳಗಾಂವಿ ಹೆದ್ದಾರಿಯಲ್ಲಿದೆ.
ಈ ತಾಲ್ಲೂಕಿನ ಉತ್ತರದಲ್ಲಿ ಕುಂದಗೋಳ, ದಕ್ಷಿಣದಲ್ಲಿ ಹಾನಗಲ್ಲು, ಪೂರ್ವದಲ್ಲಿ ಸವಣೂರು ಮತ್ತು ವಾಯವ್ಯದಲ್ಲಿ ಕಲಫಟಗಿ ತಾಲ್ಲೂಕುಗಳು ಹಾಗೂ ಪಶ್ಚಿಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕು ಸುತ್ತುವರಿದಿವೆ. ತಾಲ್ಲೂಕಿನ ವಿಸ್ತೀರ್ಣ 585.3 ಚ.ಕಿಮೀ.
ಜಿಲ್ಲೆಯ ವಾಯವ್ಯ ಗಡಿಯಲ್ಲಿರುವ ಈ ತಾಲ್ಲೂಕು ಪಶ್ಚಿಮಘಟ್ಟ ಪ್ರದೇಶದ ಸೆರಗಿನಲ್ಲಿದೆ. ತಾಲ್ಲೂಕಿನ ಭೂಮಿ ಪೂರ್ವದ ಕಡೆ ಇಳಿಜಾರಾಗಿದ್ದು ಅಲ್ಲಲ್ಲಿ ಸಣ್ಣ ಗುಡ್ಡಗಳು ಮತ್ತು ಕಿರಿದಾದ ಕಣಿವೆಗಳಿವೆ. ತಾಲ್ಲೂಕಿನ ಪೂರ್ವಭಾಗಕ್ಕೆ ಬಂದಂತೆಲ್ಲ ಬಯಲುಗಳು ಹೆಚ್ಚು ವಿಸ್ತಾರವಾಗುತ್ತವೆ. ಈ ತಾಲ್ಲೂಕಿನ ಧುಂಡಸಿ ಗ್ರಾಮದ ಬಳಿ ಜಿಲ್ಲೆಯ ಮುಖ್ಯ ಉಪನದಿ ಬೆಣ್ಣೆಹಳ್ಳ ಉಗಮಿಸಿ ಉತ್ತರಾಭಿಮುಖವಾಗಿ ಹರಿದು, ಮೆಣಸಿಗಿ ಬಳಿ ಮಲಪ್ರಭಾ ನದಿಯನ್ನು ಸೇರುತ್ತದೆ. ಈ ತಾಲ್ಲೂಕಿನ ಬಹುಭಾಗ ಈ ಹೊಳೆಯ ಜಲಾನಯನ ಪ್ರದೇಶಕ್ಕೆ ಸೇರಿದೆ. ತಾಲ್ಲೂಕಿನ ದಕ್ಷಿಣ ಭಾಗದ ತೊರೆಗಳು ವರದಾ ನದಿಯನ್ನು ಸೇರುತ್ತವೆ. ವಾರ್ಷಿಕ ಸರಾಸರಿ ಮಳೆ 811.02 ಮಿಮೀ.
ಈ ತಾಲ್ಲೂಕಿನ ಬಹುಭಾಗ ಮಲೆನಾಡು ವಲಯಕ್ಕೆ ಸೇರಿರುವುದರಿಂದ ಇಲ್ಲಿನ ಕಾಡು ಸಾಂದ್ರವಾಗಿದ್ದು ತೇಗ, ಗಂಧ, ಅಳಲೆ, ಹಲಸು, ಮಾವು, ಆಲ, ಅತ್ತಿ, ಬಿಳಿನಂದಿ, ಬೀಟೆ ಇತ್ಯಾದಿ ಮರಗಳಿಂದ ಕೂಡಿದೆ. ಪೂರ್ವದ ಕಡೆ ಹೋದಂತೆಲ್ಲ ಕಾಡು ತೆಳುವಾಗುತ್ತ ಬರುತ್ತದೆ. ತೊರೆಗಳ ತೀರದಲ್ಲಿ ಬಿದಿರುಮೆಳೆಗಳಿವೆ. ಇಲ್ಲಿನ ಕಾಡು ಪ್ರದೇಶದಲ್ಲಿ ಹುಲಿ, ಚಿರತೆ, ಕರಡಿ, ಕಾಡುಹಂದಿ, ತೋಳ ಮೊದಲಾದ ಪ್ರಾಣಿಗಳಿವೆ.
ತಾಲ್ಲೂಕಿನ ಮುಖ್ಯ ಕಸಬು ವ್ಯವಸಾಯ. ಬತ್ತ, ರಾಗಿ, ಜೋಳ ಇಲ್ಲಿನ ಪ್ರಧಾನ ಆಹಾರ ಬೆಳೆಗಳು. ಇವುಗಳ ಜೊತೆಗೆ ಸಾವೆ, ಹೆಸರು, ಕಡಲೆ, ತೊಗರಿ, ಕಬ್ಬು, ಹೊಗೆಸೊಪ್ಪು ಬೆಳೆಯುತ್ತಾರೆ. ಗೋಡಂಬಿ, ಮಾವು, ಬಾಳೆ ತೋಟದ ಬೆಳೆಗಳು.
ತಾಲ್ಲೂಕಿನಲ್ಲಿ ಅಕ್ಕಿ ಗಿರಣಿಗಳು, ಮರದ ವಸ್ತುಗಳ ತಯಾರಿಕೆ, ಅವಲಕ್ಕಿ ಚುರುಮುರಿ ತಯಾರಿಕೆ, ಬಿದಿರು ಕೆಲಸದ ಪಾತ್ರೆ ಮಾಡುವ ಮತ್ತು ಗಾಡಿ ತಯಾರಿಸುವ ಉದ್ಯಮಗಳನ್ನು ಬಿಟ್ಟರೆ ಇತರ ದೊಡ್ಡ ಕೈಗಾರಿಕೆಗಳಿಲ್ಲ.
ಶಿಗ್ಗಾಂವಿಗೆ ಉತ್ತರದಲ್ಲಿ 2 ಕಿಮೀ ದೂರದಲ್ಲಿರುವ ಗಂಜಿಗಟ್ಟಿಯಲ್ಲಿ ಸು. 8 ಚ.ಅಡಿಯ ಮೇಲ್ಚಾವಣಿಯಲ್ಲಿ ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ. ಇದೊಂದು ಅಮೂಲ್ಯ ಕೃತಿಯೆಂದು ಪ್ರಸಿದ್ಧ. ಶಿಗ್ಗಾಂವಿಗೆ ಉತ್ತರದಲ್ಲಿ 16 ಕಿಮೀ ದೂರದಲ್ಲಿರುವ ಹಿರೇಬೆಂಡಿಗೇರಿಯಲ್ಲಿ ಕಾಳಪ್ಪನ ದೇವಾಲಯವೂ ಎರಡು ಮಠಗಳೂ ಇವೆ. ಇಲ್ಲಿ ಆರನೆಯ ಚಾಳುಕ್ಯ ವಿಕ್ರಮಾದಿತ್ಯ, ಎರಡನೆಯ ಜಗದೇಕಮಲ್ಲ ಮತ್ತು ಎರಡನೆಯ ಕಳಚುರಿ ಬಿಜ್ಜಳ ಇವರ ಕಾಲದ ಅನೇಕ ಶಾಸನಗಳಿವೆ. ಶಿಗ್ಗಾಂವಿಯ ಈಶಾನ್ಯಕ್ಕೆ 12 ಕಿಮೀ ದೂರದಲ್ಲಿರುವ ಹುಲಗೂರಿನಲ್ಲಿ ಸಂತ ಹಜರತ್ ಷಾ ಸಮಾಧಿ ಇದ್ದು ಮುಸ್ಲಿಮರ ಯಾತ್ರಾಸ್ಥಳವಾಗಿದೆ. ಇಲ್ಲಿ ಸಿದ್ಧಲಿಂಗ ದೇವಾಲಯವಿದೆ. ಸು. 970ರ ಕಾಲಕ್ಕೆ ಸೇರಿದ ಖೊಟ್ಟಿಗನ ಶಾಸನವೂ ಸೇರಿದಂತೆ ಇಲ್ಲಿ 15 ಶಾಸನಗಳು ದೊರಕಿವೆ. ಶಿಗ್ಗಾಂವಿಗೆ ದಕ್ಷಿಣದಲ್ಲೂ ಯಲವಗಿ ರೈಲ್ವೆ ನಿಲ್ದಾಣಕ್ಕೆ ಸು. 19 ಕಿಮೀ ದೂರದಲ್ಲೂ ಇರುವ ಬಂಕಾಪುರ ಇತಿಹಾಸಪ್ರಸಿದ್ಧ ಸ್ಥಳ.
ಇಲ್ಲಿ ರಾಷ್ಟ್ರಕೂಟರ ಕಾಲದಿಂದ ಹಿಡಿದು ಸವಣೂರಿನ ನವಾಬರ ಕಾಲದವರೆಗಿನ ಸುಮಾರು ಹದಿನಾರು ಶಾಸನಗಳಿವೆ. ಇಲ್ಲಿನ ಅತ್ಯಂತ ಪ್ರಾಚೀನ ಶಾಸನ ರಾಷ್ಟ್ರಕೂಟರ ಒಂದನೆಯ ಅಮೋಘವರ್ಷನಿಗೆ ಸೇರಿದ್ದು. ಇದರಲ್ಲಿ ಸೂರ್ಯ ದೇವಾಲ ಯಕ್ಕೆ ಬಿಟ್ಟ ಕೊಡುಗೆಯ ಬಗ್ಗೆ ಉಲ್ಲೇಖವಿದೆ. ಇಲ್ಲಿ ಕಲಮೇಶ್ವರ ಮತ್ತು ಬಸವೇಶ್ವರ ದೇವಸ್ಥಾನಗಳಿವೆ. ಸುತ್ತಲ ಗ್ರಾಮಗಳಿಗೆ ವ್ಯಾಪಾರ ಕೇಂದ್ರವಾಗಿರುವ ಈ ಪಟ್ಟಣ, ಪುರಸಭಾ ಆಡಳಿತಕ್ಕೆ ಸೇರಿದೆ.