ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಇದನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾ ಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ.
ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರುತಾಯಿ ಶಾರದೆಯನ್ನು ಪ್ರತಿಷ್ಠಾಪಿಸಿ ಮಠವನ್ನು ಸ್ಥಾಪಿಸಲು ಕಾರಣ ಈ ಕಥೆಯಲ್ಲಿದೆ. ಒಮ್ಮೆ ತುಂಗೆಯ ತಟಕ್ಕೆ ಶಂಕರಾಚಾರ್ಯರು ಬಂದಾಗ ಜೋರಾಗಿ ಬಿಸಿಲು ಇತ್ತು. ಆ ಸಂದರ್ಭದಲ್ಲಿ ಹಾವೊಂದು ಹೆಡೆ ಬಿಚ್ಚಿ ಕಪ್ಪೆಯೊಂದಕ್ಕೆ ರಕ್ಷಣೆ ನೀಡುತ್ತಿತ್ತಂತೆ. ಶತ್ರುಗಳು ಮಿತ್ರರಾಗಿ ಸಹಕಾರಕ್ಕೆ ನಿಂತ ಈ ಸ್ಥಳದಲ್ಲಿ ಅಭೂತಪೂರ್ವವಾದ ಶಕ್ತಿ ಇದೆ ಎಂಬುದನ್ನು ಮನಗಂಡ ಆಚಾರ್ಯರು ಈ ಪ್ರದೇಶವನ್ನು ಪವಿತ್ರ ಪುಣ್ಯ ಕ್ಷೇತ್ರ ಮಾಡಿದರೆಂದು ಹೇಳಲಾಗುತ್ತದೆ.
;ಶೃಂಗೇರಿ ಶಾರದಾ ಪೀಠಕ್ಕೆ ಉತ್ತರಾಧಿಕಾರಿಗಳು-
ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಪೀಠಾರೋಹಣದ ರಜತ ಮಹೋತ್ಸವದ ಅಂಗವಾಗಿ ರವಿವಾರ (4-1-2015) ನಡೆದ ಗುರುವಂದನಾ ಸಭೆಯಲ್ಲಿ ಶ್ರೀಮಠದ ಉತ್ತರಾಧಿಕಾರಿಗಳನ್ನು ಘೋಷಿಸಲಾಯಿತು. ಸಭೆಯಲ್ಲಿ ಅನುಗ್ರಹ ಭಾಷಣ ಮಾಡಿದ ಭಾರತೀ ತೀರ್ಥರು, 37 ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮರನ್ನು ತಾವು ಆಯ್ಕೆ ಮಾಡಿದ್ದು ಅವರಿಗೆ, 2015ರ ಜನವರಿ. 22 ಮತ್ತು 23ರಂದು ಸನ್ಯಾಸತ್ವ ನೀಡುವುದಾಗಿ (ಶಿಷ್ಯ ಪರಿಗ್ರಹ) ಹೇಳಿದರು. “ಎಲ್ಲ ಸದ್ಗುಣಗಳನ್ನು ಹೊಂದಿರುವ ಶಿಷ್ಯನನ್ನು ಆಯ್ಕೆ ಮಾಡಿದ್ದು, 5-6 ವರ್ಷಗಳಿಂದ ಶಾಸ್ತ್ರಾಭ್ಯಾಸ ನೀಡುತ್ತಿದ್ದೇವೆ. ತಮಗೆ 64(2015,ಜನವರಿ) ವರ್ಷವಾಗಿದ್ದು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಜಗದಂಬೆ ಶ್ರೀ ಶಾರದೆ ನಮಗೆ ನೆನಪಿಸಿದ್ದಾರೆ,” ಎಂದು ತಿಳಿಸಿದರು [ಉಲ್ಲೇಖ-2]
ಆದಿ ಶಂಕರಾಚಾರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು ೩೬ ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು) ಪೀಠಾರೋಹಣದ ರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಹೇಳಿ ೩೭ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮರನ್ನು ಉತ್ತರಾಧಿಕಾರಿಯಾಗಿ ದಿ.4-1-2015 ರಂದು ಘೋಷಿಸಿದರು. [೧][೨]
ಪೀಠದ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿರುವ ಬ್ರಹ್ಮಚಾರಿ ಕುಪ್ಪ ವೆಂಕಟೇಶ್ವರ ಪ್ರಸಾದ ಶರ್ಮ ಅವರು ಬೆಳಿಗ್ಗೆ 8 ಗಂಟೆಗೆ ನರಸಿಂಹವನದಲ್ಲಿ ಭಾರತೀತೀರ್ಥರಿಗೆ ಗುರುವಂದನೆ ಸಲ್ಲಿಸಿದರು. ನಂತರ ಶಾರದಾಂಬಾ ದೇವಾಲಯ ಪ್ರವೇಶಿಸಿದರು. ಶಕ್ತಿ ಗಣಪತಿ ಗುಡಿಯಲ್ಲಿ ನಡೆದ ಮಹಾಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು, ಶಾರದಾಂಬೆಯ ದರ್ಶನ ಪಡೆದರು.
ಬಳಿಕ ಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ಮತ್ತಿತರ ಹಿರಿಯ ಭಕ್ತಾದಿಗಳ ಜತೆ ದೇವಸ್ಥಾನ, ಹಿಂದಿನ ಅನೇಕ ಸ್ವಾಮೀಜಿಗಳ ವೃಂದಾವನ ಸಂದರ್ಶಿಸಿದರು. ಬಳಿಕ ಕೃಚ್ಛ್ರಾಚರಣೆ ವಿಧಿಯನ್ನು ನೆರವೇರಿಸಿದರು. ವಸ್ತ್ರ, ಹಿರಣ್ಯ, ಧಾನ್ಯ ಮೊದಲಾದುವುಗಳನ್ನು ದಾನ ಮಾಡಿದರು.
ದೇವ ಋಣ, ಋಷಿ ಋಣ ಹಾಗೂ ಪಿತೃ ಋಣಗಳಿಂದ ಮುಕ್ತಿ ಪಡೆಯುವ ಸಲುವಾಗಿ ಅಷ್ಟಶ್ರಾದ್ಧ ವಿಧಿಯನ್ನು ನೆರವೇರಿಸಿದರು. ಈ ವಿಧಿಯ ಅಂಗವಾಗಿ 18 ವೈದಿಕರಿಗೆ ದಾನ ನೀಡಿ, ಅವರಿಂದ ಆಶೀರ್ವಾದ ಪಡೆದರು. ಗುರುವಾರ ರಾತ್ರಿ ಇಡೀ ಉಪವಾಸವಿದ್ದು ಜಪ ಹಾಗೂ ಪಾರಾಯಣಗಳೊಂದಿಗೆ ಜಾಗರಣೆ ನಡೆಸಿದರು.
ಶುಕ್ರವಾರ ಮುಂಜಾನೆ ಪುರುಷಸೂಕ್ತ ಹೋಮ ಹಾಗೂ ವಿರಾಜ ಹೋಮಗಳನ್ನು ನೆರವೇರಿಸಲಿರುವ ಶರ್ಮ ಅವರು ತುಂಗೆಯ ತೀರದಲ್ಲಿ ಭಾರತೀ ತೀರ್ಥ ಮಹಾಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಈ ಸಮಾರಂಭವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ವಿಶ್ವದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಶೃಂಗೇರಿಗೆ ಬಂದಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್, ಮದ್ರಾಸ್ ಹೈಕೋರ್ಟಿನ ನ್ಯಾಯಮೂರ್ತಿ ರಾಮನಾಥನ್, ಮುಂತಾದ ಗಣ್ಯರು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.(ಪ್ರಜಾವಾಣಿ ವಾರ್ತೆ-Fri,23/01/2015)
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಉತ್ತರಾಧಿಕಾರಿಯಾಗಿ ನಿಯುಕ್ತರಾದ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮಾ ಅವರಿಗೆ ಶುಕ್ರವಾರ ಶಿಷ್ಯ ಸ್ವೀಕಾರದ ನಂತರ ಜಗದ್ಗುರು ಭಾರತೀ ತೀರ್ಥರು‘ವಿಧುಶೇಖರ ಭಾರತಿ’ ಎಂಬ ಯೋಗ ಪಟ್ಟ ನೀಡಿದರು.
ದೇಶ ವಿದೇಶಗಳಿಂದ ಶೃಂಗೇರಿಗೆ ಬಂದಿದ್ದ ಸಹಸ್ರಾರು ಭಕ್ತರ ಸಮಕ್ಷಮದಲ್ಲಿ ಬೆಳಿಗ್ಗೆ 7 ಗಂಟೆಗೆ ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿ ಪುರುಷಸೂಕ್ತ ಹೋಮ, ವೀರಾಜ ಹೋಮಗಳು ನಡೆದವು. ನಂತರ ತುಂಗಾನದಿಯಲ್ಲಿರುವ ಸಂಧ್ಯಾ ಮಂಟಪದ ಬಳಿ ನದಿ ನೀರಿನಲ್ಲಿ ನಿಂತ ವೆಂಕಟೇಶ್ವರ ಪ್ರಸಾದ ಶರ್ಮಾ ಅವರು ಶಿಖಾ, ಯಜ್ಞೋಪವೀತ, ಶ್ವೇತವಸ್ತ್ರ ಪರಿತ್ಯಾಗ ಮಾಡಿದರು.
ಅಲ್ಲಿ ಜಗದ್ಗುರು ಭಾರತೀ ತೀರ್ಥರು ಶಿಷ್ಯನಿಗೆ ಪ್ರಣವೋಪದೇಶ, ಮಹಾವ್ಯಾಕ್ಯೋಪದೇಶ ನೀಡಿದರು. ನಂತರ ತುಂಗಾನದಿಯಲ್ಲಿ ಹಂಸ ಪಕ್ಷಿಯನ್ನು ಹೋಲುವಂತೆ ಸಿದ್ಧಪಡಿಸಿದ್ದ ನಾಡದೋಣಿಯಲ್ಲಿ ವೆಂಕಟೇಶ್ವರ ಪ್ರಸಾದ ಶರ್ಮಾ ಅವರು ನದಿಯನ್ನು ದಾಟಿದ ನಂತರ ಪರ್ಯಂಕ ಶೌಚ ಕಾರ್ಯ ನಡೆಯಿತು.
ಶಾರದಾಂಬಾ ದೇವಾಲಯದಲ್ಲಿರುವ ವ್ಯಾಖ್ಯಾನ ಸಿಂಹಾಸನದಲ್ಲಿ ಜಗದ್ಗುರುಗಳು ತಮ್ಮ ಶಿಷ್ಯನನ್ನು ಕುಳ್ಳಿರಿಸಿ ಅವರ ತಲೆಯ ಮೇಲೆ ಸಾಲಿಗ್ರಾಮವಿಟ್ಟು ಪೂಜೆ ನೆರವೇರಿಸಿದರು.ಶ್ರೀ ಶಂಕರಾಚಾರ್ಯರು ನೀಡಿರುವ ದಶನಾಮಗಳಲ್ಲಿ (ಭಾರತೀ, ಸರಸ್ವತಿ, ಆಶ್ರಮ, ಗಿರಿ,ತೀರ್ಥ, ಅರಣ್ಯ, ಪರ್ವತ, ಸಾಗರ, ಪುರಿ ಹಾಗೂ ವನ) ಒಂದನ್ನು ಆಯ್ಕೆ ಮಾಡಿ ನೂತನ ಶಿಷ್ಯನಿಗೆ ಹಿಂದಿನ ಗುರುಗಳಾದ ಚಂದ್ರಶೇಖರ ಭಾರತೀ ಹಾಗೂ ಅಭಿನವ ವಿದ್ಯಾತೀರ್ಥರ ನಾಮವನ್ನು ಒಳಗೊಂಡ ‘ವಿಧುಶೇಖರ ಭಾರತೀ’ ಎಂಬ ಯೋಗ ಪಟ್ಟವನ್ನು ನೀಡಿದರು.
ನೂತನ ಶ್ರೀಗಳು ವ್ಯಾಖ್ಯಾನ ಸಿಂಹಾಸನದಲ್ಲಿ ಜಗದ್ಗುರು ಭಾರತೀ ತೀರ್ಥರನ್ನು ಕುಳ್ಳಿರಿಸಿ ಪಾದಪೂಜೆ ಸಲ್ಲಿಸಿದರು. ನಂತರ ನಡೆದ ಮಹಾಸಭೆಯಲ್ಲಿ ಎಡತೊರೆ, ಶಿವಗಂಗಾ, ಆನೆಗುಂದಿ, ಹೆಬ್ಬೂರು ಮತ್ತು ಧರ್ಮಪುರಿ ಮಠಾಧೀಶರು, ಕೇಂದ್ರ ಸಚಿವ ಅನಂತಕುಮಾರ್, ಸೀಮಾಂಧ್ರ ವಿಧಾನಸಭೆ ಸಭಾಪತಿ ಒಡಲ ಶಿವಪ್ರಸಾದ್, ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್, ಸಂಸದರಾದ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಶಾಸಕರಾದ ಡಿ.ಎನ್. ಜೀವರಾಜ್, ವಿಜಯಕುಮಾರ್,
ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಎನ್. ಶ್ರೀನಿವಾಸನ್, ಟಾಫೆ ಕಂಪನಿ ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್, ಸಿಂಪ್ಸನ್ ಸಂಸ್ಥೆಯ ಮುಖ್ಯಸ್ಥ ಎ. ಕೃಷ್ಣಮೂರ್ತಿ, ಸ್ಯಾಂಗ್‌ಸುಯಿ ಸಂಸ್ಥೆಯ ಮುಖ್ಯಸ್ಥ ರಾಮಾ ಸುಬ್ರಹ್ಮಣ್ಯ ರಾಜ, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ರಾಮನಾಥನ್, ಅಮೆರಿಕದ ಅನಿವಾಸಿ ಭಾರತೀಯ ಉದ್ಯಮಿ ಯಜ್ಞ ಸುಬ್ರಹ್ಮಣ್ಯಂ, ಮಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9ರಿಂದ ಭಾರತೀ ಬೀದಿಯಲ್ಲಿ ಉಭಯಶ್ರೀಗಳ ಸ್ವರ್ಣ ಹಾಗೂ ಬೆಳ್ಳಿಯ ಪಲ್ಲಕ್ಕಿ ಉತ್ಸವ ನಡೆಯಿತು.(ಪ್ರಜಾವಾಣಿ-೨೪-೧-೨೦೧೫)