ಇದು ಕನ್ನಡ ಚಿತ್ರರಂಗದ ಹಾಗೂ ದಕ್ಷಿಣ ಭಾರತದ ಮೊಟ್ಟ ಮೊದಲ ಸಾಂಸಾರಿಕ ವಾಕ್ಚಿತ್ರ.
- ಅಜ್ಜನ ಆಸೆಗೆ ವಿರುದ್ಧವಾಗಿ ಸರಳಾ ಎನ್ನುವ ವಕೀಲರ ಪುತ್ರಿಯನ್ನು ಮದುವೆಯಾಗುವ ಸುಂದರ್ ಎನ್ನುವ ತರುಣ, ಎರಡೂ ಕುಟುಂಬಗಳ ಅಸಹಕಾರದಿಂದ ಅನುಭವಿಸುವ ಪಡಿಪಾಟಲುಗಳ ಕಥೆ ಚಿತ್ರದ್ದು. ನಾಯಕಿ ಕೊಲೆ ಆರೋಪದಲ್ಲಿ ಸಿಕ್ಕಿಬೀಳುತ್ತಾಳೆ. ಕೊನೆಗೆ ಸತ್ಯ ಹೊರಬಿದ್ದು, ಸಮಸ್ಯೆಗಳ ಸುಳಿಯಿಂದ ಸುಂದರ್ ಹೊರಬಿದ್ದು ಸಿನಿಮಾ ಸುಖಾಂತ್ಯಗೊಳ್ಳುತ್ತದೆ.
- ಸತ್ಯ ಹೇಳಿದಾಗ ತೊಂದರೆಗಳು ಸಾಮಾನ್ಯ ಎಂಬ ಅಂಶವನ್ನು ಪ್ರತಿಪಾದಿಸುವ ‘ಸಂಸಾರ ನೌಕ’ ಕನ್ನಡ ಚಿತ್ರರಂಗಕ್ಕೆ ಮಹತ್ವದ ತಿರುವು ಕೊಟ್ಟ ಚಿತ್ರ. ಹಾಗೆಯೇ ದಕ್ಷಿಣ ಭಾರತ ಚಿತ್ರರಂಗದಲ್ಲೂ ಒಂದು ಮೈಲುಗಲ್ಲು.
- ತಮಿಳು–ತೆಲುಗು ಭಾಷೆಗಳಲ್ಲೂ ನಿರ್ಮಾಣಗೊಂಡಿದ್ದು ಮತ್ತೊಂದು ವಿಶೇಷ. ಕನ್ನಡಿಗನೇ ನಿರ್ದೇಶಿಸಿದ ಪ್ರಥಮ ಕನ್ನಡ ಚಿತ್ರವೆಂದೂ ದಾಖಲಾದ ‘ಸಂಸಾರ ನೌಕ’ ಕನ್ನಡಕ್ಕೆ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರೋದ್ಯಮಕ್ಕೆ ಸಾಮಾಜಿಕ ಚಿತ್ರ ಪರಂಪರೆಗೆ ಬುನಾದಿ ಹಾಕಿಕೊಟ್ಟಿತು.
- ಕನ್ನಡ ಚಿತ್ರರಂಗಕ್ಕೆ ಅನನ್ಯ ಕೊಡುಗೆ ಕೊಟ್ಟ ಬಿ.ಆರ್. ಪಂತುಲು ನಾಯಕರಾಗಿ ಮೊದಲಬಾರಿಗೆ ಕ್ಯಾಮೆರಾ ಎದುರಿಸಿದ ಈ ಚಿತ್ರದಲ್ಲಿ ನಾಯಕಿ ಸರಳಾ ಪಾತ್ರ ವಹಿಸಿದ್ದವರು ಕನ್ನಡದ ಪ್ರಸಿದ್ಧ ನಾಯಕ ನಟಿ ಎಂ.ವಿ. ರಾಜಮ್ಮ.
- ಈ ಚಿತ್ರದಲ್ಲಿ ಡಿಕ್ಕಿ(ಕನ್ಯಾಕುಮಾರಿ ದೀಕ್ಷಿತ್) ಎಂಬ ಪಾತ್ರ ಮಾಡಿ ಜನಪ್ರಿಯರಾದ ಮಾಧವರಾವ್ ಅವರು ಮುಂದೆ ಡಿಕ್ಕಿ ಮಾಧವರಾವ್ ಎಂದೇ ಖ್ಯಾತಿ ಹೊಂದಿದರು.
- ಸರೋಜಮ್ಮ (ಗಿರಿಜೆ), ಎಂ.ಎಸ್. ಮಾಧವರಾವ್ (ಮಾಧು), ಎಂ. ಮಾಧವರಾವ್ (ಡಿಕ್ಕಿ), ಎಚ್. ಕೃಷ್ಣಮೂರ್ತಿ (ಬ್ಯಾರಿಸ್ಟರ್), ಎಚ್.ಆರ್. ಹನುಮಂತರಾವ್, ಜಿ.ಟಿ. ಬಾಲಕೃಷ್ಣರಾವ್ ಅವರಂತಹ ರಂಗಭೂಮಿ ಪರಿಣಿತರನ್ನ ಚಿತ್ರರಂಗಕ್ಕೆ ತಂದ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇವರೊಂದಿಗೆ ಹುಣಸೂರು ಕೃಷ್ಣಮೂರ್ತಿ, ಸೋರಟ್ ಅಶ್ವತ್ ಕೂಡ ತಾರಾಗಣದಲ್ಲಿದ್ದರು.ಎಸ್.ಕೆ. ಪದ್ಮಾದೇವಿ ‘ಸಂಸಾರ ನೌಕ’ದಲ್ಲಿ ಸುಶೀಲೆ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದರು.
- ಸಹೋದರ ನಂಜಪ್ಪನವರ ಒತ್ತಾಸೆಯಿಂದ ತಮ್ಮ ದೇವಿ ಫಿಲಂಸ್ ಮೂಲಕ ‘ಸಂಸಾರ ನೌಕ’ವನ್ನು ತಯಾರಿಸಿದ ಕೆ. ರಾಜಗೋಪಾಲ ಚೆಟ್ಟಿಯಾರ್ ನಿರ್ಮಾಣದ ಯಾವುದೇ ಹಂತದಲ್ಲೂ ಗುಣಮಟ್ಟಕ್ಕೆ ರಾಜಿ ಮಾಡಿಕೊಳ್ಳಲಿಲ್ಲ.
- ಚಿತ್ರ ಚೆನ್ನಾಗಿ ಮೂಡಿ ಬರಬೇಕೆಂದು ಉತ್ತಮ ತಂತ್ರಜ್ಞರನ್ನು ಉಪಯೋಗಿಸಿಕೊಂಡರು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಡಿ.ಬಿ. ಚವಾಣ್ ಹಾಗೂ ವಿದೇಶಿ ತಂತ್ರಜ್ಞ ಟಿ. ಟೆಲಂಗ್ ಕೆಲಸ ಮಾಡಿದ್ದರು. ಶರ್ಮ ಬ್ರದರ್ಸ್ ವಾದ್ಯಗೋಷ್ಠಿ ಹಾಗೂ ಎಸ್. ನಾಗರಾಜರಾವ್ ಸಂಗೀತ ಚಿತ್ರಕ್ಕಿತ್ತು.
- ನಾಯಕನ ದುಃಖದ ಸನ್ನಿವೇಶಗಳಲ್ಲಿ ಹೆಸರಾಂತ ಸಂಗೀತ ವಿದ್ವಾಂಸ ಎಂ.ಎಂ. ದಂಡಪಾಣಿ ದೇಶಿಕರ್ ಅವರು ಕಲ್ಯಾಣಿ ರಾಗದ ಹಾಡುಗಳನ್ನು ಸಂಯೋಜಿಸಿದ್ದರು. ‘ಮಿರುಗುವ ತಾರೆ ಧರೆಗೀಗ ಬಾರೆ...’ ಸೇರಿದಂತೆ ಹದಿನೇಳಕ್ಕೂ ಹೆಚ್ಚು ಹಾಡುಗಳಿದ್ದ ಈ ಚಿತ್ರಕ್ಕಾಗಿ ಕಾಂಬೋಜಿ, ಮೋಹಿನಿ, ಬೈರವಿ, ಸಾರಂಗ, ಮಧುಮನೆ ಇತ್ಯಾದಿ ರಾಗಗಳು ಬಳಕೆಯಾಗಿದ್ದವು.