ಸರಪಂಚನು (ಪ್ರಧಾನ) ಭಾರತದಲ್ಲಿ ಗ್ರಾಮ ಸಭೆ ಎಂದು ಕರೆಯಲ್ಪಡುವ ಸ್ಥಳೀಯ ಸ್ವಯಮಾಡಳಿತದ ಗ್ರಾಮಮಟ್ಟದ ಸಾಂವಿಧಾನಿಕ ಸಂಸ್ಥೆಯಿಂದ ಚುನಾಯಿತನಾದ ತೀರ್ಮಾನ ಮಾಡುವ ವ್ಯಕ್ತಿ.[೧] (ಪಂಚರು ಎಂದು ಕರೆಯಲ್ಪಡುವ) ಇತರ ಆಯ್ಕೆಯಾದ ಪಂಚಾಯತ ಸದಸ್ಯರೊಂದಿಗೆ ಸರಪಂಚನು ಗ್ರಾಮ ಪಂಚಾಯತಿಯನ್ನು ರಚಿಸುತ್ತಾನೆ. ಸರಪಂಚನು ಸರ್ಕಾರಿ ಅಧಿಕಾರಿಗಳು ಮತ್ತು ಹಳ್ಳಿ ಸಮುದಾಯದ ನಡುವೆ ಸಂಪರ್ಕದ ಕೇಂದ್ರಬಿಂದುವಾಗಿರುತ್ತಾನೆ ಮತ್ತು ಐದು ವರ್ಷಗಳವರೆಗೆ ಅಧಿಕಾರವನ್ನು ಹೊಂದಿರುತ್ತಾನೆ.
ಭಾರತದಲ್ಲಿ ಪಂಚಾಯತಿಗಳು ಪ್ರಾಚೀನ ಕಾಲದಿಂದಲು ಅಸ್ತಿತ್ವದಲ್ಲಿದ್ದರೂ, ಸ್ವಾತಂತ್ರ್ಯದ ನಂತರದ ಭಾರತದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಸಮುದಾಯದ ಅಭಿವೃದ್ಧಿ ಯೋಜನೆಗಳ ಬಹುಭಾಗವನ್ನು ಪಂಚಾಯತಿಗಳ ಮೂಲಕ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗಿದೆ. ಭಾರತದಲ್ಲಿ ಸಂಯುಕ್ತ ಆಡಳಿತ ರಚನೆಯಿರುವುದರಿಂದ ವಿಭಿನ್ನ ರಾಜ್ಯಗಳು ಗ್ರಾಮ ಪಂಚಾಯತಿಗಳು ಮತ್ತು ಸರಪಂಚರ ಅಧಿಕಾರಗಳನ್ನು ನಿರ್ಣಯಿಸುವ ಭಿನ್ನ ಕಾನೂನುಗಳನ್ನು ಹೊಂದಿರುತ್ತವೆ.