1661-1718. ವೈದ್ಯ ಹಾಗೂ ಕವಿ.
ಜನನ ಯಾರ್ಕ್ಷೈರಿನ ಗಣ್ಯ ಕುಟುಂಬದಲ್ಲಿ. ಕೇಂಬ್ರಿಜ್ನಲ್ಲಿ ಉಚ್ಚ ಶಿಕ್ಷಣ ಮುಗಿಸಿ, ಲಂಡನ್ ವೈದ್ಯ ವಿದ್ಯಾಲಯದ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಒಳ್ಳೆಯ ಸ್ವಭಾವ, ವಾಕ್ಕೌಶಲ. ವಿದ್ವತ್ತು, ಮತ್ತು ಜನಸೇವಾ ಪ್ರವೃತ್ತಿಯಿಂದಾಗಿ ಇವನ ವೃತ್ತಿ, ವ್ಯಾಪ್ತಿಗಳೆರಡೂ ವೃದ್ಧಿಸಿದವು. ರಾಜಕೀಯವಾಗಿ ಈತ ಹ್ವಿಗ್ ಬಣಕ್ಕೆ ಸೇರಿದವನು. ಪ್ರಸಿದ್ಧ ಪ್ರಬಂಧಕಾರನಾದ ಅಡಿಸನ್ ಮತ್ತು ಕವಿ ಪೋಪ್ ಈತನ ಗೆಳೆಯರು. ತನ್ನ ನಿವೃತ್ತಿಯ ಸಮಯದಲ್ಲಿ ಗಾರ್ತ್ ಒಂದನೆಯ ಜಾರ್ಜ್ ದೊರೆಗೆ ವೈದ್ಯನಾಗಿದ್ದು ಅವನಿಂದ ನೈಟ್ ಪದವಿಯನ್ನು ಪಡೆದ (1714).
ಗಾರ್ತ್ ಬರೆದ ಡಿಸ್ಪೆನ್ಸರಿ (1699) ಎಂಬ ಅಣುಕು ಕವನ ಆ ಕಾಲಕ್ಕೆ ಬಹು ಪ್ರಸಿದ್ಧವಾಗಿತ್ತು. ಈತ ತನ್ನ ಗೆಳೆಯರಾದ ಅಡಿಸನ್, ಅಲೆಕ್ಸಾಂಡರ್ ಪೋಪ್ ಮೊದಲಾದವರ ನೆರವಿನಿಂದ ಓವಿಡ್ಡನ ಮೆಟಮಾರ್ಫಸಿಸ್ ಎಂಬ ಕೃತಿಯನ್ನು ಅನುವಾದ ಮಾಡಿದ್ದಾನೆ.
ವೈದ್ಯಕೀಯ ಸಹಾಯ ಬಡಬಗ್ಗರಿಗೆ ಉಚಿತವಾಗಿ ದೊರೆಯಬೇಕು ಎಂಬ ವಿಷಯ ಪ್ರಚಲಿತವಾಗಿದ್ದ ಆ ಕಾಲದಲ್ಲಿ ಬಹಳಷ್ಟು ಜನ ವೈದ್ಯರು ಆ ಅಭಿನಂದನೀಯ ಉದ್ದೇಶಕ್ಕೆ ಬೆಂಬಲ ಕೊಟ್ಟರು. ಈ ಯೋಜನೆಯ ಬಗ್ಗೆ ಗಾರ್ತ್ ಬಹಳ ಆಸಕ್ತಿ ವಹಿಸಿದನಲ್ಲದೆ ಅದಕ್ಕಾಗಿ ಶ್ರಮಿಸಿದ ಕೂಡ. ಆದರೆ ಗ್ರಂದಿಗೆಯವರು ತಮ್ಮ ವ್ಯಾಪಾರ ಕುಂದುತ್ತದೆಂದು ಬಗೆದು ಆ ಸಲಹೆಗೆ ಒಪ್ಪಲಿಲ್ಲ. ತಿಕ್ಕಾಟ ಪ್ರಾರಂಭವಾಯಿತು. ಗಾರ್ತ್ ಈ ತಿಕ್ಕಾಟವನ್ನೇ ವಸ್ತುವಾಗಿಟ್ಟುಕೊಂಡು ತನ್ನ ಡಿಸ್ಪೆನ್ಸರಿ ಎಂಬುದೊಂದು ಆರು ಕಾಂಡಗಳ ವ್ಯಂಗ್ಯ ಕವನವನ್ನು ರಚಿಸಿದ. ಇಂದು ಸಾಮಾನ್ಯ ಸಾಹಿತ್ಯಾಸಕ್ತನಿಗೆ ಗಾರ್ತ್ನ ನೆನಪಿದ್ದಲ್ಲಿ ಅದು ಈ ಪದ್ಯದಿಂದ ಮಾತ್ರ. ಅತಿ ಉದ್ದವೆನ್ನಿಸುವ ಈ ಕೃತಿ ಕಡೆಗೂ ಹಠಾತ್ತನೆ ನಿಂತಂತೆ ತೋರುತ್ತದೆಯಲ್ಲದೆ ಸಹಜವಾಗಿ ಮುಗಿಯಿತೆನಿಸುವುದಿಲ್ಲ. ಅಲ್ಲಲ್ಲೇ ಕೆಲವು ಭಾಗಗಳು ಬಹಳ ಚೆನ್ನಾಗಿವೆ. ಪಿತ್ಥ ಗಹ್ವರದ ವರ್ಣನೆ, ಸಮಕಾಲೀನ ಲೇಖಕ ಸರ್ ರಿಚರ್ಡ್ ಬ್ಲ್ಯಾಕ್ಮೋರ್ಗೆ, ಮಾಡಿರುವ ಹಿತೋಪದೇಶ, ಅಟರ್ಬರಿಯ ಪಾತ್ರಚಿತ್ರಣ ಮುಂತಾಗಿ ಒಂದೆರಡನ್ನು ಹೆಸರಿಸಬಹುದು. ಕವನದ ಓಟ ಸರಾಗವಾಗಿದೆ.
1710ರಲ್ಲಿ ವ್ಹಿಗ್ ಸರ್ಕಾರ ಉರುಳಿದಾಗ ಲಾರ್ಡ್ ಗೊಡಾಲ್ಫಿನ್ ಪದಚ್ಯುತ ನಾದುದರ ಬಗ್ಗೆ ಬರೆದ ಸಣ್ಣ ಕವಿತೆಯೊಂದು ಅಡಿಸನ್ನನ ಪ್ರಶಂಸೆಗೆ ಪಕ್ಕಾಯಿತೆಂದು ಜಾನ್ಸನ್ ಹೇಳುತ್ತಾನೆ.
ನಿಷ್ಠ ಹ್ವಿಗ್ ಆಗಿದ್ದರೂ ಗಾರ್ತ್ ತನ್ನ ಉತ್ತಮ ಸ್ವಭಾವ, ವ್ಯಕ್ತಿಗಳಿಂದಾಗಿ ಎಲ್ಲರಿಗೂ ಬೇಕಾದವನಾಗಿ ಬಾಳಿದ. ಪೋಪ್ನಂಥ ತೀಕ್ಷ್ಣ ವಿಡಂಬಕ ಕೂಡ ಇವನ ವ್ಯಕ್ತಿತ್ವವನ್ನು ಮೆಚ್ಚಿ ಬರೆದಿದ್ದಾನೆ.