ಸಿ.ಇ.ಎಂ.ಜೋಡ್ ( ಸಿರಿಲ್ ಎಡ್ವಿನ್ ಮಿಚಿನ್‍ಸನ್ ಜೋಡ್ )1891-1953. ಇಂಗ್ಲೆಂಡಿನ ವಿಚಾರವಾದಿ ತತ್ತ್ವಶಾಸ್ತ್ರಜ್ಞ.
ಸೌತ್ ಹ್ಯಾಂಪ್ಟನ್‍ನಲ್ಲಿ ಹುಟ್ಟಿದ. ಈತ ಬ್ಲಂಡಲ್ಸ್ ಸ್ಕೂಲ್ ಹಾಗೂ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ. ಮಿಲಿಟರಿಗೆ ಸೇರುವುದು ತನ್ನ ಆತ್ಮಸಾಕ್ಷಿಗೆ ಸಲ್ಲದ ವಿಚಾರವೆಂದು ತಿಳಿಸಿದ ಈತ ಮೊದಲ ಮಹಾಯುದ್ಧದ ಕಾಲದ ಸಮರವಿರೋಧಿ ಎನಿಸಿಕೊಂಡ. ಅನಂತರ 16 ವರ್ಷಗಳ ಪರ್ಯಂತ ಬ್ರಿಟನ್ನಿನ ಸಿವಿಲ್ ವಿಭಾಗದಲ್ಲಿ ಸೇವೆ ಸಲ್ಲಿಸಿದ. ಕೆಲಕಾಲ ವಾಣಿಜ್ಯ ಸಂಸ್ಥೆಯಲ್ಲೂ ಕಾರ್ಮಿಕ ಇಲಾಖೆಯಲ್ಲೂ ಕೆಲಸಮಾಡಿದ. 1930ರಲ್ಲಿ ಲಂಡನ್ನಿನ ಬರ್ಕ್‍ಬೆಕ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಮತ್ತು ಮನಶಾಸ್ತ್ರ ವಿಭಾಗಗಳ ಮುಖ್ಯಸ್ಥನಾದ. ಆ ಕಾಲೇಜು ಈತನನ್ನು ಡಾಕ್ಟರ್ ಆಫ್ ಲಿಟರೇಚರ್ ಪ್ರಶಸ್ತಿ ನೀಡಿ ಗೌರವಿಸಿತು. 1940-47ರ ವರೆಗೆ ಈತ ಬ್ರಿಟಿಷ್ ಬ್ರಾಡ್‍ಕ್ಯಾಸ್ಟಿಂಗ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಬ್ರೇನ್ಸ್ ಟ್ರಸ್ಟ್ ಎಂಬ ಹೆಸರಿನ ಪ್ರಮುಖ ಪ್ರಸಾರ ಕಾರ್ಯಕ್ರಮದ ನಿಯೋಜಕನಾಗಿ ಕೆಲಸ ಮಾಡಿದ.
ಈತನ ಮುಖ್ಯಕೃತಿಗಳು: ಎಸ್ಸೇಸ್ ಇನ್ ಕಾಮನ್‍ಸೆನ್ಸ್ ಫಿಲಾಸಫಿ (1919) ಇಂಟ್ರೊಡಕ್ಷನ್ ಟು ಮಾಡರ್ನ್ ಪೊಲಿಟಿಕಲ್ ತಿಯೊರಿ (1924); ದಿ ಫ್ಯೂಚರ್ ಆಫ್ ಮಾರಲ್ಸ್ (1924); ಮೈಂಡ್ ಆಂಡ್ ಮ್ಯಾಟರ್ (1925); ದಿ ಫ್ಯೂಚರ್ ಆಫ್ ಲೆಷರ್ (1928); ದಿ ಮೀನಿಂಗ್ ಆಫ್ ಲೈಫ್ (1929); ಗ್ರೇಟ್ ಫಿಲಾಸಫೀಸ್ ಆಫ್ ದಿ ವಲ್ರ್ಡ್ (1931); ಗೈಡ್ ಟು ಮಾಡರ್ನ್ ತಾಟ್ (1933); ಗೈಡ್ ಟು ಫಿಲಾಸಫಿ (1936); ಫಿಲಾಸಫಿ ಫಾರ್ ಅನರ್ ಟೈಮ್ಸ್ (1940); ದಿ ಫ್ಯೂಚರ್ ಆಫ್ ಲೈಫ್ (1944); ಎ ಫಿಲಾಸಾಫಿಕಲ್ ಎನ್‍ಕ್ವೈರಿ (1948); ಇಂಟ್ರೊಡಕ್ಷನ್ ಟು ಕಾನ್‍ಟೆಂಪೊರರಿ ನಾಲೆಜ್ (1951); ದಿ ಪ್ಲಷರ್ ಆಫ್ ಬೀಯಿಂಗ್ ಒನ್‍ಸೆಲ್ಫ್ (1951); ದಿ ರಿಕವರಿ ಆಫ್ ಬಿಲೀಫ್ (1952). ದಿ ಬುಕ್ ಆಫ್ ಜೋಡ್ ಎಂಬ ಕೃತಿ ಇವನ ಆತ್ಮಚರಿತ್ರೆಯಾಗಿದೆ.