ಸುಂದರ್ ಲಾಲ್ ಬಹುಗುಣ | |
---|---|
![]() | |
Born | ೯ ಜನವರಿ ೧೯೨೭ ಮರೊಡ ಹಳ್ಳಿ, ತೆಹ್ರಿ, ಉತ್ತರಖಂಡ |
Died | ೨೧ ಮೇ ೨೦೨೧ |
Cause of death | ಕೋವಿಡ್-೧೯[೧] |
Occupation(s) | ಕಾರ್ಯಕರ್ತ, ಗಾಂಧಿವಾದಿ, ಪರಿಸರವಾದಿ |
ಸುಂದರ್ ಲಾಲ್ ಬಹುಗುಣ (೯ ಜನವರಿ ೧೯೨೭-೨೧ ಮೇ ೨೦೨೧) ಒಬ್ಬ ಗರ್‌ವಾಲ್ (ಉತ್ತರಖಂಡ ರಾಜ್ಯದಲ್ಲಿದೆ) ಜನಾಂಗದ ಪರಿಸರವಾದಿ ಮತ್ತು ಚಿಪ್ಕೊ ಚಳುವಳಿಯ ನೇತಾರರಗಿದ್ದರು. ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದರು. ೧೯೮೦ರ ದಶಕದಿಂದ ೨೦೦೪ರ ಆರಂಭದವರೆಗೆ ತೆಹ್ರಿ ಅಣೆಕಟ್ಟು ವಿರೋಧಿ ಆಂದೋಲನವನ್ನು ಮುನ್ನಡೆಸಿದರು. ಅವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದರು.[೨]
ಸುಂದರ್ ಲಾಲ್ ಬಹುಗುಣರವರು ಉತ್ತರಖಂಡದ ತೆಹ್ರಿ ಬಳಿ ಮರೊಡ ಎಂಬ ಹಳ್ಳಿಯಲ್ಲಿ ೯ ಜನವರಿ ೧೯೨೭ರಂದು ಜನಿಸಿದರು.[೩] ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀ ದೇವ್ ಸುಮನ್ ರವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಬಹುಗುಣರವರು ೧೯೪೭ರ ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದ್ದರು. ಅವರು ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಗಾಂಧಿಯವರ ಪ್ರೇರಣೆಯಿಂದಾಗಿ, ಸುಮಾರು ೪೭೦೦ ಕಿಲೋಮೀಟರ್ ನಷ್ಟು ಹಿಮಾಲಯ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಮಾಡಿ ಮೆಗಾ ಅಭಿವೃದ್ಧಿ ಯೋಜನೆಯಿಂದ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದರು.[೪]
ಚಿಪ್ಕೊ ಚಳುವಳಿಯು ಕಾಡು ಪ್ರದೇಶ ಹಾಗೂ ಕಾಡಿನ ಮರಗಳನ್ನು ರಕ್ಷಿಸಲು ಉತ್ತರಪ್ರದೇಶದಲ್ಲಿ ೨೬ ಮಾರ್ಚ್ ೧೯೭೪ರಂದು ಪ್ರಾರಂಭಿಸಿದರು. ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಬೆಳೆಸುವ ಮೂಲಕ ಚಳುವಳಿಗೆ ಬೆಂಬಲವನ್ನು ಪಡೆದರು. ಚಿಪ್ಕೊ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿಯನ್ನು ನೀಡಿತು. ಬಹುಗುಣರವರು 'ಪರಿಸರವು ಶಾಶ್ವತ ಆರ್ಥಿಕತೆ' ಎಂಬ ಚಿಪ್ಕೊ ಘೋಷಣೆಯನ್ನು ರಚಿಸಿದ್ದಾರೆ.[೫] ಅವರು ಚಳುವಳಿಯನ್ನು ಇನ್ನಷ್ಟು ಪ್ರಾಮುಖ್ಯಗೊಳಿಸಲು ೧೯೮೧ರಿಂದ ೧೯೮೩ರವರೆಗೆ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಚಳುವಳಿಗೆ ಬೆಂಬಲವನ್ನು ಪಡೆದರು.[೬][೭] [೮]
ಮೇ ೨೧ ೨೦೨೧ರಂದು ಕೋವಿಡ್-೧೯ ಕಾರಣದಿಂದ ಸುಂದರ್‌ಲಾಲ್ ಅವರು ಮರಣ ಹೊಂದಿದರು. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ದೆಹಲಿಯ ಏಮ್ಸ್(ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ)ಯಲ್ಲಿ ಬಹುಗುಣ ಅವರು ಚಿಕಿತ್ಸೆ ಪಡೆಯುತ್ತಿದ್ದರು.