ಭಾರತೀಯ ಸರ್ಸಪರಿಲ್ಲಾ ಎಂದು ಕರೆಯಲ್ಪಡುವ ಸೊಗದೆ ಬೇರು(ಹೆಮಿಡೆಸ್ಮಸ್ ಇಂಡಿಕಸ್) ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸಸ್ಯದ ಒಂದು ಜಾತಿಯಾಗಿದೆ.[೧] ಇದು ಭಾರತದ ಹೆಚ್ಚಿನ ಭಾಗದಲ್ಲಿ, ಮೇಲಿನ ಗಂಗಾ ಬಯಲಿನಿಂದ ಪೂರ್ವಕ್ಕೆ ಅಸ್ಸಾಂ ಮತ್ತು ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾರತದ ಕೆಲವು ಸ್ಥಳಗಳಲ್ಲಿ ಕಂಡುಬರುತ್ತದೆ.
ಈ ಬೇರು ಸರ್ಸಪರಿಲ್ಲಾಕ್ಕೆ ಪರ್ಯಾಯವಾಗಿದೆ (ಸ್ಮಿಲಾಕ್ಸ್, ಸ್ಮಿಲಾಕೇಸಿಯ ಉಷ್ಣವಲಯದ ಜಾತಿಯ ಒಣಗಿದ ಬೇರು; ಭಾರತದಲ್ಲಿ ಸ್ಮಿಲಾಕ್ಸ್ ಆಸ್ಪೆರಾ ಎಲ್. ಮತ್ತು ಸ್ಮಿಲಾಕ್ಸ್ ಓವಾಲಿಫೋಲಿಯಾ ರಾಕ್ಸ್‌ಬಿ.). ಇದನ್ನು ಮೆಕ್ಸಿಕನ್ ಸರ್ಸಾಪರಿಲ್ಲಾ ಸ್ಮಿಲಾಕ್ಸ್ ಅರಿಸ್ಟೊಲೊಚಿಫೋಲಿಯಾ ಮಿಲ್ ಮತ್ತು ಜಮೈಕನ್ ಸರ್ಸಪರಿಲ್ಲಾ ಸ್ಮಿಲಾಕ್ಸ್ ಆರ್ನಾಟಾ ಹುಕ್.ಎಫ್..ನಿಂದ ಪ್ರತ್ಯೇಕಿಸಬೇಕು.
ಇದು ಕನ್ನಡದಲ್ಲಿ ಹಾಲುಬಳ್ಳಿ ಬೇರು, ನಾಮ ಬೇರು, ಸುಗಂಧಿ ಬೇರು, ಸೊಗದೆ ಬೇರು, ಅನಂತ ಮೂಲ ಹೀಗೆ ಹಲವು ಹಸರುಗಳಲ್ಲಿ ಕರೆಯಲ್ಪಡುತ್ತದೆ.[೨] ಇದನ್ನು ದಕ್ಷಿಣ ಭಾರತದಲ್ಲಿ ಸ್ಥಳೀಯವಾಗಿ ನರುನೀಂದಿ ಅಥವಾ ನನ್ನಾರಿ ಎಂದೂ ಕರೆಯಲಾಗುತ್ತದೆ.[೩][೪] ಇದರ ಎಲೆಗಳು ದಾಳಿಂಬೆ ಗಿಡದ ಎಲೆಗಳನ್ನು ಹೋಲುತ್ತದೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ. ಪ್ರತಿ ಎಲೆಯ ಮಧ್ಯೆ ಬಿಳಿ ನಾಮವಿರುವುದು. ಆದುದರಿದಂದಲೆ ಈ ಬಳ್ಳಿಗೆ ನಾಮದ ಬಳ್ಳಿಯೆಂದು ಕರೆಯುತ್ತಾರೆ. ಈ ಬಳ್ಳಿಯ ಬೇರುಗಳಿಗೆ ಸುಗಂಧವಿರುವುದರಿಂದ ಸುಗಂಧಿ ಬೇರು ಎಂದು ಸಹ ಕರೆಯುವರು. ಮರಗಿಡಗಳ ಬೇರನ್ನು ತುಂಡು ಮಾಡಿದಾಗ ಪರಿಮಳವುಳ್ಳ ಹಾಲು ಸೋರುತ್ತದೆ. ಹಾಗಾಗಿ ಇದನ್ನು ಹಾಲುಬಳ್ಳಿ ಬೇರು ಎಂದೂ ಕರೆಯುವರು.
ಇದು ತೆಳ್ಳಗಿನ, ಅಂಕುಡೊಂಕಾದ, ಕೆಲವೊಮ್ಮೆ ಸಾಷ್ಟಾಂಗವಾಗಿ ಹರಡುವ ಅಥವಾ ಅರೆ ನೆಟ್ಟಗೆ ಮೇಲೇರುವ ಸಸ್ಯವಾಗಿದೆ.[೫] ಬೇರುಗಳು ಮರದಿಂದ ಕೂಡಿದ್ದು, ಪರಿಮಳಯುಕ್ತವಾಗಿರುತ್ತವೆ. ಕಾಂಡವು ತೆಳ್ಳಗೆ, ದುಂಡಗೆ ಇದ್ದು ಗ್ರಂಥಿಗಳಲ್ಲಿ ದಪ್ಪವಾಗಿರುತ್ತದೆ. ಎಲೆಗಳು ವಿರುದ್ಧವಾಗಿದ್ದು, ಚಿಕ್ಕ-ತೊಟ್ಟುಗಳು, ಬಹಳ ವ್ಯತ್ಯಾಸಗೊಳ್ಳುವ, ಅಂಡಾಕಾರದ-ಆಯತಾಕಾರದಿಂದ ರೇಖೀಯ-ಲ್ಯಾನ್ಸಿಲೇಟ್ ಆಗಿರುತ್ತವೆ. ಹೂವುಗಳು ಹೊರಭಾಗದಲ್ಲಿ ಹಸಿರು ಬಣ್ಣದ್ದಾಗಿರುತ್ತವೆ, ಒಳಭಾಗದಲ್ಲಿ ನೇರಳೆ ಬಣ್ಣದ್ದಾಗಿರುತ್ತವೆ ಮತ್ತು ಉಪ-ಸೆಸೈಲ್ ಆಕ್ಸಿಲ್ಲರಿ ಸೈಮ್‌ಗಳಲ್ಲಿ ತುಂಬಿರುತ್ತವೆ.
ಹೆಮಿಡೆಸ್ಮಸ್ ಇಂಡಿಕಸ್ ಅನ್ನು ನನ್ನಾರಿ ಶರಬತ್‌ನಂತಹ ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತದೆ ಮತ್ತು ಇದನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.[೬][೭]
ಭಾರತದ ದಕ್ಷಿಣ ರಾಜ್ಯಗಳಲ್ಲಿ (ವಿಶೇಷವಾಗಿ ತಮಿಳುನಾಡಿನಲ್ಲಿ) ಈ ಬೇರಿನ ಉಪ್ಪಿನಕಾಯಿಯನ್ನು ಮಾಡಿ ಅಕ್ಕಿ ಭಕ್ಷ್ಯಗಳೊಂದಿಗೆ ಬಡಿಸಲಾಗುತ್ತದೆ.[೮][೯]
ಹೆಚ್. ಇಂಡಿಕಸ್‌ನ ಬೇರುಗಳು ಹೆಕ್ಸಾಟ್ರಿಯಾಕಾಂಟೇನ್, ಲುಪಿಯೋಲ್, ಅದರ ಆಕ್ಟಾಕೊಸಾನೊಯೇಟ್, α-ಅಮಿರಿನ್, β-ಅಮಿರಿನ್, ಅದರ ಅಸಿಟೇಟ್ ಮತ್ತು ಸಿಟೊಸ್ಟೆರಾಲ್ ಅನ್ನು ಹೊಂದಿರುತ್ತವೆ. ಇದು ಹೊಸ ಕೂಮರಿನೊ-ಲಿಗ್ನಾಯ್ಡ್-ಹೆಮಿಡೆಸ್ಮಿನೈನ್, ಹೆಮಿಡೆಸ್ಮಿನ್ I ಮತ್ತು ಹೆಮಿಡೆಸ್ಮಿನ್ II೫೦, ಎರಡು ಒಲಿಯನೆನ್‌ಗಳನ್ನು ಒಳಗೊಂಡಂತೆ ಆರು ಪೆಂಟಾಸೈಕ್ಲಿಕ್ ಟ್ರೈಟರ್‌ಪೆನ್‌ಗಳು ಮತ್ತು ಮೂರು ಉರ್ಸೆನ್‌ಗಳನ್ನು ಸಹ ಒಳಗೊಂಡಿದೆ. ಕಾಂಡವು ಕ್ಯಾಲೊಜೆನಿನ್ ಅಸೆಟೈಲ್ಕಾಲೊಜೆನಿನ್-೩-೦-β-ಡಿ-ಡಿಜಿಟಾಕ್ಸೊಪಿರಾನ್ನೊಸಿಲ್-೦-β-ಡಿ-ಡಿಜಿಟಾಕ್ಸೊಪಿರೊನ್ಸಿಲ್-೦-β-ಡಿ-ಡಿಜಿಟಾಕ್ಸೊಪಿರಾನೊಸೈಡ್ ಅನ್ನು ಹೊಂದಿರುತ್ತದೆ. ಇದು ೩-ಕೀಟೊ-ಲುಪ್-೧೨-ಎನ್-೨೧ ೨೮-ಓಲೈಡ್ ಜೊತೆಗೆ ಲುಪನೋನ್, ಲುಪಿಯೋಲ್-೩-β-ಅಸಿಟೇಟ್, ಹೆಕ್ಸಾಡೆಕಾನೊಯಿಕ್ ಆಮ್ಲ, ೪-ಮೆಥಾಕ್ಸಿ-೩-ಮೆಥಾಕ್ಸಿಬೆನ್ಜಾಲಾಲ್ಡಿಹೈಡ್ ಮತ್ತು ೩-ಮೆಥಾಕ್ಸಿ-೪-೫ಮೆಥಾಕ್ಸಿಬೆನ್ಝಾಲ್ಡಿಕೋಡ್‌ಸೈಡ್-ಇಂಡಿಸಿನ್ ಮತ್ತು ಹೆಮಿಡಿನ್ ಅನ್ನು ಸಹ ಹೊಂದಿರುತ್ತದೆ. ಎಲೆಗಳು ಟ್ಯಾನಿನ್‌ಗಳು, ಫ್ಲೇವನಾಯ್ಡ್‌ಗಳು, ಹೈಪರೋಸೈಡ್, ರುಟಿನ್ ಮತ್ತು ಕೂಮರಿನೊಗಳನ್ನು ಹೊಂದಿರುತ್ತವೆ. ಲ್ಯುಕೋಡರ್ಮಾ ಲಿಗ್ನಾಯ್ಡ್‌ಗಳಾದ ಹೆಮಿಡೆಸ್ಮಿನೈನ್, ಹೆಮಿಡೆಸ್ಮಿನ್ I ಮತ್ತು ಹೆಮಿಡೆಸ್ಮಿನ್ II ಗಳು ಎಲೆಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಸಂಯುಕ್ತಗಳ ಅಪರೂಪದ ಗುಂಪಾಗಿದೆ.[೧೦][೧೧]
ಸೊಗದೆ ಬೇರು, ಶುದ್ಧಿ ಮಾಡಿದ ಹಿರೇಮದ್ದಿನ ಗಡ್ಡೆ, [[ಕೊತ್ತಂಬರಿ[[ ಕಾಳು ಇವುಗಳನ್ನು ೧೦-೧೦ ಗ್ರಾಂ ಮಿಶ್ರಮಾಡಿ, ನಯವಾಗಿ ಚೂರ್ಣಿಸಿ, ೧೦ ಗ್ರಾಂ ಚೂರ್ಣವನ್ನು ಎರಡು ಲೋಟ ನೀರಿಗೆ ಹಾಕಿ ೧/೨ ಲೋಟದಷ್ಟು ಕಷಾಯ ಮಾಡಿ, ನಯವಾಗಿ ಚೂರ್ಣಿಸುವುದು. ೧೦ ಗ್ರಾಂ ಚೂರ್ಣವನ್ನು ಎರಡು ಲೋಟ ನೀರಿಗೆ ಹಾಕಿ ೧/೨ ಲೋಟದಷ್ಟು ಕಷಾಯ ಮಾಡಿ, ತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸುವುದು. ಈ ಶೋಧಿಸಿದ ಕಷಾಯಕ್ಕೆ ಕೆಂಪು ಕಲ್ಲುಸಕ್ಕರೆ ಪುಡಿ ಮತ್ತು ಹಾಲು ಸೇರಿಸಿ ಕುಡಿಯುವುದು. ೧/೪(ಕಾಲು) ಟೀ ಚಮಚ ಪ್ರತಿನಿತ್ಯ ಎರಡು ವೇಳೆ ಸೇವಿಸಬೇಕು. ಬೆಂಕಿಯಿಂದ ಸುಟ್ಟ ಗಾಯಗಳಿಗೆ ಚಕಿತ್ಸೆ ಪಡೆಯುವಾಗ ಈ ಕಷಾಯವು ಬಹಳ ಪರಿಣಾಮಕಾರಿಯಾಗಿದೆ.
ಈ ಸೊಗದೆ ಬೇರು ರಕ್ತದಲ್ಲಿನ ಕ್ರಿಮಿ ಕೀಟಗಳನ್ನು ನಾಶ ಪಡಿಸಿ ಚರ್ಮದ ಕಾಯಿಲೆಗಳಾದ ದದ್ದು, ಅಲರ್ಜಿ, ಪಿತ್ತದ ಗುಳ್ಳೆಗಳನ್ನು ನಿವಾರಿಸಿ, ರಕ್ತಶುದ್ಧಿಯನ್ನು ಮಾಡುತ್ತದೆ.[೧೨][೧೩][೧೪]
ಸೊಗದೆ ಬೇರನ್ನು ಜಜ್ಜಿಕೊಂಡು ನೀರಿಗೆ ಹಾಕಿ ಚೆನ್ನಾಗಿ ಹಾಕಿ ಕುದಿಸಿ ಅದಕ್ಕೆ ಬೆಲ್ಲ ಹಾಗೂ ಲಿಂಬುರಸ ಸೇರಿಸಿ ಸೇವಿಸಿದರೆ ಪಿತ್ತವನ್ನು ಕಡಿಮೆ ಮಾಡಬಹುದಾಗಿದೆ.
ಸೊಗದೆ ಬೇರಿನ ತೊಗಟೆಯನ್ನು ನುಣ್ಣಗೆ ಚೂರ್ಣ ಮಾಡಿ, ಭರಣಿಯಲ್ಲಿ ಶೇಖರಿಸಿ ೫ ಗ್ರಾಂ ಚೂರ್ಣವನ್ನು ಒಂದು ಬಟ್ಟಲು ನೀರಿನಲ್ಲಿ ಕದಡಿ, ಪ್ರತಿ ನಿತ್ಯ ಎರಡು ವೇಳೆ ಸೇವಿಸಿದರೆ ಕೇಶವೃದ್ಧಿಯೂ ಆಗುತ್ತದೆ.
ಸೊಗದೆ ಬೇರಿನ ಪುಡಿಯನ್ನು ಅಥವಾ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಬೆರೆಸಿ ಬಾಣಂತಿಯರಿಗೆ ನೀಡಬೇಕು. ಆದಷ್ಟು ಹಸಿ ಹಾಲಿನಲ್ಲಿ, ಖಾಲಿ ಹೊಟ್ಟೆಯಲ್ಲಿ ನೀಡುವುದು ಒಳ್ಳೆಯದು. ಆಯುರ್ವೇದದಲ್ಲಿಯೂ ಎದೆಹಾಲಿನ ಉತ್ಪತ್ತಿಗೆ ಸೊಗದೆ ಬೇರನ್ನು ಬಳಸಲಾಗುತ್ತದೆ. ಸೊಗದೆ ಬೇರನ್ನು ನೀಡುವುದರಿಂದ ಹಾಲು ಉತ್ಪತ್ತಿಯಾಗುವುದರ ಜೊತೆಗೆ ಎದೆಹಾಲಿನಲ್ಲಿ ದೋಷವಿದ್ದರೆ ಅದು ನಿವಾರಣೆಯಾಗಿ ಹಾಲು ಕೂಡ ಶುದ್ಧವಾಗುತ್ತದೆ.
ಉರಿಮೂತ್ರ ಉಂಟಾದರೆ ಇದರ ಚೂರ್ಣವನ್ನು ೩ ರಿಂದ ೬ ಗ್ರಾಂ ನಷ್ಟು ತೆಗೆದುಕೊಂಡು ಎಳನೀರು ಅಥವಾ ಹಾಲಿನಲ್ಲಿ ಸೇರಿಸಿ ಕುಡಿದರೆ ದೇಹವು ತಂಪಾಗಿ ಉರಿಮೂತ್ರದ ಸಮಸ್ಯೆಯು ನಿವಾರಣೆಯಾಗುತ್ತದೆ.
ಅತಿಯಾದ ಬಾಯಾರಿಕೆಯಾದರೂ ಈ ಸೊಗದೆ ಬೇರಿನ ಕಷಾಯವನ್ನು ಮಾಡಿ ಸೇವಿಸಬಹುದು. ಇದರಿಂದ ದೇಹದಲ್ಲಿನ ಅನುಪಯುಕ್ತ ವಸ್ತುಗಳು ಮೂತ್ರದಲ್ಲಿ ಹೋರಹೋಗುವಂತೆ ಇದು ಮಾಡುತ್ತದೆ ಮತ್ತು ನಿಶ್ಯಕ್ತಿಯೂ ನಿವಾರಣೆಯಾಗುತ್ತದೆ.
ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದಾಗ ಅಥವಾ ಪಿತ್ತವಾಗಿದ್ದಾಗ ಬಾಯಿಯಲ್ಲಿ ಹುಣ್ಣುಗಳಾಗುತ್ತವೆ. ಈ ಹುಣ್ಣುಗಳನ್ನು ಗುಣವಾಗಿಸಲು ಸೊಗದೆ ಬೇರು ಉತ್ತಮ ಮನೆಮದ್ದಾಗಿದೆ. ಜೊತೆಗೆ ಇದು ಮಂಡಿಯೂತಕ್ಕೆ ಕೂಡ ಪರಿಹಾರವನ್ನು ನೀಡುತ್ತದೆ. ಸೊಗದೆ ಬೇರಿನ ಪುಡಿಯನ್ನು ನೀರಿನಲ್ಲಿ ಕಲಸಿ ಹಚ್ಚಿದರೆ ಮಂಡಿಯೂತ ಹಾಗೂ ನೋವು ಕೆಲವು ದಿನಗಳಲ್ಲಿ ನಿವಾರಣೆಯಾಗುತ್ತದೆ.[೧೫]
ಇದು ಕಾಮಾಲೆ ರೋಗಕ್ಕೂ ಔಷಧವಾಗಿದ್ದು, ೫೦ ಗ್ರಾಂ ಸೊಗದೆ ಬೇರು ಮತ್ತು ೫ ಗ್ರಾಂ ಕಾಳುಮೆಣಸಿನ ಪುಡಿಯನ್ನು ನಯವಾಗಿ ಕುಟ್ಟಿ ಚೂರ್ಣ ಮಾಡಿ, ದಿವಸಕ್ಕೆ ಒಂದೇ ವೇಳೆ ಅಂದರೆ ಬೆಳಗಿನ ಹೊತ್ತು ಮಾತ್ರ ಸೇವಿಸಬೇಕು.
ಸೊಗದೆಬೇರನ್ನು ನೀರಿನಲ್ಲಿ ತೇದು ಗಂಧವನ್ನು ಕಣ್ಣುಗಳಿಗೆ ಅಂಜನವಿಕ್ಕುವುದು. ಅಥವಾ ಸೊಗದೆ ಬೇರಿನ ಒಣಗಿದ ಎಲೆಗಳನ್ನು ಮಣ್ಣಿನ ಪಾತ್ರೆಯಲ್ಲಿ ಸುಟ್ಟು ಬೂದಿಯನ್ನು ಶೇಖರಿಸುವುದು. ಒಂದು ಚಿಟಿಕೆ ಬೂದಿಯನ್ನು ಜೇನುತುಪ್ಪದಲ್ಲಿ ಕಲೆಸಿ ಕಣ್ಣುಗಳಿಗೆ ಹಚ್ಚುವುದು ಅಥವಾ ನಾಮದ ಬೇರ(ಸೊಗದೆ ಬೇರು)ನ್ನು ನೀರಿನಲ್ಲಿ ಅಥವಾ ಜೇನುತುಪ್ಪದಲ್ಲಿ ತೇದು ಕಣ್ಣುಗಳಿಗೆ ಹಚ್ಚುವುದರಿಂದ ನೇತ್ರ ಪುಷ್ಪವನ್ನು ಗುಣಪಡಿಸಬಹುದು.
ಈ ಸೊಗದೆ ಬೇರುಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಇಟ್ಟುಕೊಂಡು ಪ್ರತಿದಿನ ಈ ಚೂರ್ಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವೀರ್ಯವೃದ್ಧಿಯಾಗುತ್ತದೆ.[೧೬] ದೇಹದ ಉಷ್ಣತೆಯನ್ನು ಹೊರಹಾಕಲು ಕೂಡ ಈ ಬೇರು ನೆರವಾಗುತ್ತದೆ.[೧೭]
ಸೊಗದೆ ಬೇರಿನ ಚೂರ್ಣ ಒಂದು ಟೀ ಚಮಚ, ಸೌಂಪಿನ ಪುಡಿ ೧/೨ ಟೀ ಚಮಚ ಮತ್ತು ಎರಡು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಎರಡು ಬಟ್ಟಲು ನೀರಿಗೆ ಹಾಕಿ ಕಷಾಯ ಮಾಡಿ, ಕಷಾಯವನ್ನ ಕಾಫಿ-ಟೀಯಂತೆ ಶೋಧಿಸಿ, ಸಕ್ಕರೆ ಮತ್ತು ಹಾಲಿಗೆ ಸೇರಿಸಿ ಕುಡಿಯಬೇಕು. ಇದು ಸುವಾಸನೆಯನ್ನು ಹೊಂದಿದ್ದು, ದೇಹಕ್ಕೆ ತ್ರಾಣ ನೀಡಿ, ಆರೋಗ್ಯವನ್ನು ಕಾಪಾಡುತ್ತದೆ.