ಸೋಲ್ ಕಢಿ ಒಂದು ಬಗೆಯ ಪಾನೀಯವಾಗಿದ್ದು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಕ್ಷುಧಾವರ್ಧಕವಾಗಿದೆ. ಇದನ್ನು ಸಾಮಾನ್ಯವಾಗಿ ಅನ್ನದೊಂದಿಗೆ ತಿನ್ನಲಾಗುತ್ತದೆ ಅಥವಾ ಕೆಲವೊಮ್ಮೆ ಊಟದ ನಂತರ ಅಥವಾ ಜೊತೆಗೆ ಕುಡಿಯಲಾಗುತ್ತದೆ. ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಜನಪ್ರಿಯವಾಗಿರುವ ಇದನ್ನು ತೆಂಗಿನ ಹಾಲು ಮತ್ತು ಮುರುಗಲ ಹಣ್ಣಿನಿಂದ (ಕೋಕಮ್, ಅಮ್‍ಸೋಲ್ ಎಂದೂ ಪರಿಚಿತವಾಗಿದೆ) ತಯಾರಿಸಲಾಗುತ್ತದೆ. ತಾಜಾ ತೆಂಗಿನಕಾಯಿಯ ದ್ರವರೂಪದ ಸಾರವಾದ ತೆಂಗಿನ ಹಾಲಿನಿಂದ ಸೋಲ್ ಕಢಿಯನ್ನು ತಯಾರಿಸಲಾಗುತ್ತದೆ; ಆದರೆ, ಇಂದಿನ ದಿನದಲ್ಲಿ ಈ ಹೊರತೆಗೆಯಲ್ಪಟ್ಟ ಹಾಲು ಟೆಟ್ರಾಪ್ಯಾಕ್‍ನಲ್ಲೂ ಸಿಗುತ್ತದೆ. ಹೀಗೆ ದೊರೆತ ತೆಂಗಿನ ಹಾಲನ್ನು ಸಾಮಾನ್ಯವಾಗಿ ಅಗಲ್ ಅಥವಾ ಕೋಕಮ್‍ನೊಂದಿಗೆ ಬೆರೆಸಿ, ಸ್ವಲ್ಪ ಪ್ರಮಾಣದಲ್ಲಿ ಉಪ್ಪು, ಸಾಸಿವೆ ಕಾಳುಗಳು ಮತ್ತು/ಅಥವಾ ಮೆಣಸಿನಕಾಯಿ ಬೆಳ್ಳುಳ್ಳಿ ಪೇಸ್ಟ್‌ನ್ನು ರುಚಿಗಾಗಿ ಮತ್ತು ಪ್ರೋಬಯಾಟಿಕ್ ಪದಾರ್ಥಗಳನ್ನು ವರ್ಧಿಸಲು ಸೇರಿಸಲಾಗುತ್ತದೆ.