Terminalia paniculata | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | Rosids |
ಗಣ: | ಮಿರ್ಟೇಲ್ಸ್ |
ಕುಟುಂಬ: | ಕಾಂಬ್ರೆಟೇಸಿಯೇ |
ಕುಲ: | ಟರ್ಮಿನೇಲಿಯಾ |
ಪ್ರಜಾತಿ: | T. paniculata
|
Binomial name | |
Terminalia paniculata Roth
|
ಹುನಾಲು ಕಾಂಬ್ರಿಟೇಸೀ ಕುಟುಂಬದ ಟರ್ಮಿನೇಲಿಯ ಪ್ಯಾನಿಕುಲೇಟ ಪ್ರಭೇದದ ಪರ್ಣಪಾತಿ ಮರ.[೧]
ತೊಗಟೆ ಮಂದ, ಕಪ್ಪು ಮಿಶ್ರ ಕಂದುಬಣ್ಣ. ಉದ್ದುದ್ದನೆಯ ಸೀಳಿಕೆಗಳಿಂದ ಕೂಡಿರುತ್ತದೆ. ಕಾಂಡದ ಕೆಳಭಾಗ ಕೆಲವು ಬಾರಿ ಆನಿಕೆಗಳಿಂದ (ಬಟ್ರೆಸ್) ಕೂಡಿರುತ್ತದೆ. ಕರ್ನಾಟಕದ ಮಿಶ್ರ ಪರ್ಣಪಾತಿ ಕಾಡುಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.[೨] ಕಂದರಗಳಲ್ಲಿ ಇಳುಕಲಿನಲ್ಲಿ ತೇವಮಯ ಆದರೆ ಜೌಗಿಲ್ಲದ ಪ್ರದೇಶಗಳಲ್ಲಿ ಸು.30ಮೀ ಎತ್ತರದವರೆಗೂ ಬೆಳೆಯುವುದುಂಟು. ಅಪರೂಪಕ್ಕೆ ಜಂಬು ಮಣ್ಣು ನೆಲದಲ್ಲೂ ಕಂಡುಬರುತ್ತದೆ. ಸ್ವಾಭಾವಿಕ ಪುನರುತ್ಪತ್ತಿ ಸಮರ್ಪಕ.
ಚೌಬೀನೆಯ ಬಿಳಿಮರ ಬೂದುಬಣ್ಣ. ಕೆಚ್ಚು ಬೂದುಮಿಶ್ರ ಕಂದುಬಣ್ಣದಿಂದ ಅಚ್ಚ ಕಂದುಬಣ್ಣದವರೆಗೂ ಇರುವುದು. ಹದಮಾಡಲು ಕಷ್ಟ. ಜಾಗ್ರತೆ ಒಣಗಿದರೆ ಬಿರುಕು ಬಿಡುವುದು. ಹಸಿಯದರಲ್ಲಿ ಕೊಯ್ಸಿ ಅರೆವಾಸಿಗಿಟ್ಟರೆ ಉತ್ತಮ. ಕೊಯ್ತಕ್ಕೆ ಅಷ್ಟು ಕಷ್ಟವಿಲ್ಲ. ತಕ್ಕಮಟ್ಟಿಗೆ ಬಲಯುತವಾಗಿರುತ್ತದೆ. ಬಾಳಿಕೆ ಮಧ್ಯಮ.
ರೈಲ್ವೆ ಕೋಚ್ ಹಾಗೂ ಸ್ಲೀಪರುಗಳ ತಯಾರಿಕೆಗೆ, ದೋಣಿಕಟ್ಟುವುದಕ್ಕೆ ಇದನ್ನು ಉಪಯೋಗಿಸುತ್ತಾರೆ. ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಮನೆ ಕಟ್ಟಲು ಮತ್ತು ಇನ್ನಿತರ ಮರಗೆಲಸಗಳಿಗೆ ಉಪಯೋಗಿಸುವುದಿದೆ.