ಹೆನ್ರಿ ಆರ್ಥರ್ ಜೋನ್ಸ್ (1851-1929) ನಾಟಕಕಾರ.
ಬಕಿಂಗ್ ಹ್ಯಾಮ್‍ಷೈರಿನ ಗ್ರ್ಯಾಂಡ್ ಬರೊ ಎಂಬಲ್ಲಿ ಹುಟ್ಟಿದ. ತಂದೆ ವೆಲ್ಷ್ ವಂಶದ ಒಬ್ಬ ರೈತ. ವಿದ್ಯಾಭ್ಯಾಸ ಹಳ್ಳಿಯ ಶಾಲೆಯಲ್ಲೇ ಆಯಿತು. 1864ರಿಂದ 15 ವರ್ಷ ಬಟ್ಟೆ ವ್ಯಾಪಾರ ಮಾಡುತ್ತಿದ್ದು 1869ರಲ್ಲಿ ಇಟ್ಸ ಓನ್ಲಿ ರೌಂಡ್ ದಿ ಕಾರ್ನರ್ ಎಂಬ ನಾಟಕ ಬರೆದ. ಅದು 1878ರಲ್ಲಿ ಪ್ರದರ್ಶಿತವಾಯಿತು. ನಾಲ್ಕು ವರ್ಷಗಳ ಅನಂತರ ಈತ ಬರೆದ ದಿ ಸಿಲ್ವರ್ ಕಿಂಗ್ ಎಂಬುದು 289 ದಿನ ಪ್ರದರ್ಶನಗೊಂಡು ಈತನಿಗೆ ಅಪಾರ ಕೀರ್ತಿ ತಂದಿತು. ಭಾವಾತಿರೇಕವುಳ್ಳ ಮೆಲೊಡ್ರಾಮಾ ಮಾದರಿಯ ಅಂದಿನ ನಾಟಕಗಳೆಲ್ಲೆಲ್ಲ ಇದು ಅತ್ಯಂತ ಯಶಸ್ವಿ ನಾಟಕ ಎನಿಸಿವೆ. ಜೋನ್ಸ್ ಸುಮರು 30 ವರ್ಷಗಳ ಕಾಲ ನಾಟಕ ರಚನೆ ಮಾಡಿದ. ಹಾರ್ಡ್ ಹಿಟ್ (1887), ದಿ ಡಾನ್ಸಿಂಗ್ ಗರ್ಲ್ (1891). ದಿ ಲಯರ್ಸ್ (1897), ಮಿಸೆಸ್ ಡೇನ್ಸ್ ಡಿಫೆನ್ಸ್ (1900)-ಇವು ಈತನ ಖ್ಯಾತ ನಾಟಕಗಳು. ದಿ ಹಿಪೊಕ್ರಿಟ್ಸ್ (1906) ಮತ್ತು ದಿ ಲೈ (1914) ಎಂಬುವು ಲಘುವಲ್ಲದ ವಿಚಾರಶೀಲ ನಾಟಕಗಳು.
ಸುಮಾರು ನೂರು ವರ್ಷಗಳ ಕಾಲ ಬರಡು ಬಿದ್ದು ಹೋಗಿದ್ದ ಇಂಗ್ಲಿಷ್ ರಂಗಭೂಮಿಗೆ ವಾಸ್ತವಿಕತೆಯನ್ನು ತಂದ ಯಶಸ್ಸಿಗೆ ಜೋನ್ಸನೂ ಕಾರಣನೆಂದು ಸಾಹಿತ್ಯ ಚರಿತ್ರೆ ಹೇಳುತ್ತದೆ.