ಡಾ.ಜಿ.ಎಸ್.ಶಿವರುದ್ರಪ್ಪ ಶಿವಮೊಗ್ಗಜಿಲ್ಲೆಯ ಶಿಕಾರಿಪುರದ ತಾಲೂಕಿನ ಈಸೂರುಗ್ರಾಮದಲ್ಲಿ ಫೆಬ್ರವರಿ ೭, ೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ.
ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (೧೯೪೯) ಪದವಿ ಪಡೆದರು.
ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (೧೯೫೩) ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.
ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದರು.
೧೯೫೫ ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
೧೯೬೩ರ ನವೆಂಬರ್‌ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು "ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು.
ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ' ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.
೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೬ ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.
೨೦೦೬ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವುರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ.
ಜಿ.ಎಸ್.ಶಿವರುದ್ರಪ್ಪನವರು ೧೯೯೨ ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಸ್ನೇಹ ಕಾರ್ತೀಕ,ಗೌರವ,ಹಣತೆ, ಇವು ಜಿ.ಎಸ್.ಎಸ್ ಅವರಿಗೆ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥಗಳು.
ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ನಿಧನರಾದರು. ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅಂದು ಸ್ವರ್ಗಸ್ಥರಾದರು.[೧] ಜಿ.ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು ಮರಣಾನಂತರ ಮಣ್ಣು ಮಾಡದೆ ಸುಡಲಾಯಿತು. ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ದಿ. 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು.[೨]